ಗೋಕರ್ಣದಲ್ಲಿ ಟೂರಿಸ್ಟ್ ಬೈಕ್ ಸೌಲಭ್ಯ ಪ್ರಾರಂಭ

ಗೋಕರ್ಣದಲ್ಲಿ ಪ್ರವಾಸಿಗರಿಗೆ ಟೂರಿಸ್ಟ್ ಬೈಕ್ ನೀಡುತ್ತಿರುವುದು

ಪ್ರವಾಸೋದ್ಯಮದ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ

ನಮ್ಮ ಪ್ರತಿನಿಧಿ ವರದಿ

ಗೋಕರ್ಣ : ರಾಜ್ಯದ ಪ್ರವಾಸೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿದ ಗೋಕರ್ಣದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಅಧಿಕೃತ ಲೈಸೆನ್ಸ್ ಪಡೆದ ಟೂರಿಸ್ಟ್ ಬೈಕ್ ಸೌಲಭ್ಯ ಪ್ರಾರಂಭಿಸಲಾಗಿದ್ದು, ಪ್ರವಾಸೋದ್ಯಮದ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ.

ಹಲವು ವರ್ಷಗಳಿಂದ ಗೋಕರ್ಣದಲ್ಲಿ ಅನಧಿಕೃತವಾಗಿ ಬೈಕ್ ಬಾಡಿಗೆ ಕೊಡುವ ಪದ್ಧತಿ ಪ್ರಾರಂಭವಾಗಿದ್ದು, ಪ್ಯಾಸೆಂಜರ್ ರಿಕ್ಷಾದವರಿಗೆ ತುಂಬಾ ನಷ್ಟ ಉಂಟಾಗುತ್ತಿತ್ತು. ಈಗಾಗಲೇ ಗೋಕರ್ಣದಿಂದ ದುಬ್ಬನಸಸಿಯವರೆಗೆ ಸುಮಾರು 300ಕ್ಕೂ ಹೆಚ್ಚು ಮೋಟಾರ್ ಬೈಕನ್ನು ಅನಧಿಕೃತವಾಗಿ ಬಾಡಿಗೆಗೆ ಕೊಡಲಾಗುತ್ತಿದ್ದು, ಈ ಬಗ್ಗೆ ರಿಕ್ಷಾ ಸಂಘದವರು ಜಿಲ್ಲಾಧಿಕಾರಿಯವರೆಗೂ ದೂರು ಸಲ್ಲಿಸಿದ್ದರು.

ಬೆಂಗಳೂರಿನ ವಿಕೆಂಡ್ ರೈಡ್ ಎಡ್ವೆಂಚರ್ ಕಂಪೆನಿ ಗೋಕರ್ಣದಲ್ಲಿ ಈ ಸೌಲಭ್ಯ ಪ್ರಾರಂಭಿಸಿದೆ. ಗೋಕರ್ಣದ ಅಧಿಕೃತ ಏಜೆಂಟರಾಗಿ ಗಣಪತಿ ನಾಯ್ಕರನ್ನು ನೇಮಿಸಲಾಗಿದ್ದು, ಈಗಾಗಲೇ ಹಲವು ಬೈಕ್ ಗೋಕರ್ಣ ಮಾರುಕಟ್ಟೆಗೆ ಬಂದಿದೆ.

ಕಿಡಿಗೇಡಿಗಳಿಂದ ತೊಂದರೆ

ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿರುವ ಇಂಜನಿಯರುಗಳು ಕೆಲವು ದಿನಗಳ ಹಿಂದೆ ಮೋಟಾರ್ ಬೈಕ್ ಬಾಡಿಗೆ ಪಡೆದು ಕುಡ್ಲೆ ಬೀಚಿಗೆ ಹೋಗಿದ್ದರು ಎನ್ನಲಾಗಿದೆ. ಬೈಕ್ ಪಾರ್ಕಿಂಗ್ ಮಾಡಿದ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಬೈಕಿನ ಪೆಟ್ರೋಲ್ ಟ್ಯಾಂಕಿಗೆ ಮಣ್ಣನ್ನು ತುಂಬಿ ಇಂಜಿನ್ ಸೀಜ್ ಆಗುವಂತೆ ಮಾಡಿದ್ದರು. ಸುಮಾರು 5 ಕಿ ಮೀ ಬೈಕ್ ನಡೆಸಿಕೊಂಡೇ ಬಂದ ಪ್ರವಾಸಿಗರು ಈ ಬಗ್ಗೆ ಪೊಲೀಸರಲ್ಲಿ ದೂರನ್ನು ಸಹ ನೀಡಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯ ಪ್ರವಾಸೋದ್ಯಮ ನಿರ್ದೇಶಕರಿಗೂ ದೂರು ನೀಡಿ ಗೋಕರ್ಣದಲ್ಲಿ ತಮಗಾದ ಕಹಿ ಅನುಭವವನ್ನು ತಿಳಿಸಿದ್ದಾರೆ.