ವ್ಯಕ್ತಿಗೆ ಹಲ್ಲೆ ಪ್ರಕರಣ : ಕೊನೆಗೂ ದೂರು ದಾಖಲಿಸಿಕೊಂಡ ಗೋಕರ್ಣ ಪೊಲೀಸರು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಗೋಕರ್ಣ : ಇಲ್ಲಿಗೆ ಸಮೀಪದ ಹಿರೇಗುತ್ತಿಯ ಚೆಕ್ಪೋಸ್ಟ್ ಪೊಲೀಸರ ಹಲ್ಲೆ ಪ್ರಕರಣ ಮಹತ್ತರ ತಿರುವು ಪಡೆದಿದ್ದು, ಕೊನೆಗೂ ಗೋಕರ್ಣ ಪೊಲೀಸರು ಹಲ್ಲೆಗೊಳಗಾದವರಿಂದ ಮಂಗಳವಾರ ರಾತ್ರಿ ದೂರು ದಾಖಲಿಸಿಕೊಂಡಿದ್ದಾರೆ.

ಸುಮಾ ಶಾಂತಾರಾಮ ಪ್ರಭು ಎಂಬ ಮಹಿಳೆಯೇ ದೂರು ನೀಡಿದವಳಾಗಿದ್ದು, ತನ್ನ ಪತಿಗೆ ಶುಕ್ರವಾರ ಬೆಳಿಗಿನ ಜಾವದಲ್ಲಿ ಹಿರೇಗುತ್ತಿಯ ಚೆಕ್ಪೋಸ್ಟಿನ ಪೊಲೀಸರು ಗಾಡಿಯ ದಾಖಲೆ ಸರಿಯಿದ್ದರೂ ಲಂಚ ನೀಡುವಂತೆ ಪೀಡಿಸಿದಾಗ, ಹಣ ನೀಡಲು ನಿರಾಕರಿಸಿದ್ದರಿಂದ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಲ್ಲದೇ ಹÀಲ್ಲೆ ಮಾಡಿದ್ದಾರೆ. ತಪ್ಪಿಸಲು ಬಂದ ನನಗೂ, ನನ್ನ ಮಾವನಿಗೂ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಮೋಹನ ಗೌಡ, ಹಿರೇಗುತ್ತಿ ಸಹಾಯಕ ಪೊಲೀಸ್ ಸಂಚಾರಿ ಘಟಕದ ನಿತ್ಯಾ, ನಾಗರಾಜ ರಾಮದಾಸ ನಾಯಕ, ನಾಗರಾಜ ಗಣಪತಿ ನಾಯಕ ಎಂಬ 4 ಜನರ ಮೇಲೆ ದೂರು ದಾಖಲಾಗಿದೆ. ಈ ಮೊದಲು ದೂರು ದಾಖಲಿಕೊಳ್ಳಲು ಪೊಲೀಸರು ನಿರಾಕರಿಸಿದ್ದರು. ಈ ಬಗ್ಗೆ `ಕನ್ನಡ ಜನಾಂತರಂಗ’ ವಿವರವಾಗಿ ವರದಿ ಪ್ರಕಟಿಸಿತ್ತು. ಅಲ್ಲದೇ ಹಲ್ಲೆಗೊಳಗಾದವರು ಮಂಗಳವಾರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ವಿವರಿಸಿದ್ದರು. ಅವರ ನಿರ್ದೇಶನದಂತೆ ಗೋಕರ್ಣ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣ ತೀವ್ರ ಕುತೂಹಲ ಪಡೆದಿದ್ದು, ಹಿರೇಗುತ್ತಿಯ ಚೆಕ್ಪೋಸ್ಟ್ ಪೊಲೀಸರ ವರ್ತನೆ ದೃಶ್ಯ ಮಾಧ್ಯಮದಲ್ಲೂ ಪ್ರಸಾರಗೊಂಡಿತ್ತು.