ಸ್ವರಕ್ಷಣೆಯ ಕಲೆ ಕರಾಟೆಗೆ ಹೆಣ್ಮಕ್ಕಳಲ್ಲಿ ಹೆಚ್ಚುತ್ತಿರುವ ಆಸಕ್ತಿ : ಸುರತ್ಕಲ್ ಶಾಲೆಯಲ್ಲಿ 50 ವಿದ್ಯಾರ್ಥಿನಿಯರಿಗೆ ತರಬೇತಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಹಿಳಾ ದೌರ್ಜನ್ಯ, ಯುವತಿಯರ ಮೇಲಿನ ಲೈಂಗಿಕ ಕಿರುಕುಳ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ ಕಲೆ ಅಗತ್ಯವಾಗಿ ಬೇಕಾಗಿದೆ. ಮಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಮೇಯರ್ ಚಿನ್ನದ ಪದಕ ಬಾಚಿಕೊಂಡಿದ್ದು ಹೆಗ್ಗಳಿಕೆಯಾದರೆ, ಇದೀಗ ಸ್ವರಕ್ಷಣೆಗಾಗಿ ಇರುವ ಕರಾಟೆ ಕಲೆಯನ್ನು ಕಲಿಸುವ ಯೋಜನೆಯನ್ನು ಸರಕಾರ ಹಮ್ಮಿಕೊಂಡಿದೆ.

ವಿದ್ಯಾರ್ಥಿನಿಯರ ಕರಾಟೆ ಕಲೆಗೆ ಶಾಲಾ, ಕಾಲೇಜಿನ ವಿದ್ಯಾರ್ಥಿಗಳ ಸಹಿತ ಪೋಷಕರಿಂದಲೂ ಉತ್ತಮ ಸ್ಪಂದನೆ ದೊರಕುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹೆಣ್ಮಕ್ಕಳಿಗಾಗಿ ಇದನ್ನು ಆರಂಭಿಸಿದ್ದು, ಒಟ್ಟು 18 ಗಂಟೆಗಳ ತರಬೇತಿಯನ್ನು 8, 9 ಹಾಗೂ 10ನೇ ತರಗತಿಯವರಿಗೆ ನೀಡಲಾಗುತ್ತಿದೆ. ಮುಖ್ಯವಾಗಿ ಇದರಲ್ಲಿ ಸ್ವರಕ್ಷಣೆಗೆ ಅಗತ್ಯವಿರುವ ಮುಖ್ಯ ಅಂಶಗಳನ್ನು ಕಲಿಸಲಾಗುತ್ತಿದೆ.

ಪಠ್ಯೇತರ ಚಟುವಟಿಕೆಗಳ ಪೈಕಿ ಕರಾಟೆ ಕಲಿಕೆಯನ್ನು ಸೇರಿಸಿರುವುದು ಶಾಲಾ ಬಾಲಕಿಯರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಸ್ವರಕ್ಷಣೆ, ಏಕಾಗ್ರತೆ ಹೆಚ್ಚಲು ಹಾಗೂ ನಾಯಕತ್ವ ಗುಣವನ್ನು ಬೆಳೆಸಲು ಕೂಡ ಕರಾಟೆ ಸಹಕಾರಿಯಾಗಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಇಂತಹ ಕರಾಟೆ ಕಲಿಕೆಗೆ ಪೂರ್ವ ತಯಾರಿ ಬೇಕಿಲ್ಲ. ಆರ್ಥಿಕ ವೆಚ್ಚವೂ ಅಧಿಕವೇನಿಲ್ಲ. ಕಲಿತ ಬಳಿಕ ಅದನ್ನು ಪ್ರತಿನಿತ್ಯ ಮಾಡಬೇಕಾದ ಅಗತ್ಯವೂ ಇಲ್ಲ. ಅಪಾಯ ಎದುರಾದಾಗ ಎದುರಾಳಿಯನ್ನು ಹೊಡೆದೋಡಿಸಬಹುದಾದ ಕಲೆ ಇದು. 14 ವರ್ಷದೊಳಗಿನ ವಿದ್ಯಾರ್ಥಿನಿಯರನ್ನು ಕೇಂದ್ರೀಕರಿಸಿ ಇದೀಗ ಕರಾಟೆ ಕಲಿಸಲಾಗುತ್ತಿದೆ. ಶಾಲಾ ಅವಧಿಯ ಅನುಕೂಲಕರವಾದ ಯಾವುದೇ ಸಮಯದಲ್ಲಿ ತರಗತಿ ನಡೆಸಬಹುದಾಗಿದ್ದು, ಒಂದೆರಡು ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಗೆ ಸರಿಯಾಗಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಕನಿಷ್ಠ ವಾರದ ಎರಡು ತರಗತಿಗೆ ವಿದ್ಯಾರ್ಥಿನಿಯರು ಹಾಜರಾಗಬೇಕು.

ಸ್ವ ರಕ್ಷಣಾತ್ಮಕ ಶಿಕ್ಷಣಕ್ಕಾಗಿ ಪ್ರತಿ ವಿದ್ಯಾರ್ಥಿನಿಗೆ ಸರಕಾರ 200 ರೂ ವ್ಯಯಿಸುತ್ತಿದೆ. ಸರಕಾರೇತರ ಸಂಸ್ಥೆಗಳ ಮೂಲಕ ಕರಾಟೆ ಶಿಕ್ಷರನ್ನು ನೇಮಿಸಲಾಗುತ್ತದೆ. ಸುರತ್ಕಲಿನಲ್ಲಿರುವ ಕೃಷ್ಣಾಪುರ ಹೈಸ್ಕೂಲಿನಲ್ಲೇ 50ಕ್ಕೂ ಮಿಕ್ಕಿ ವಿದ್ಯಾರ್ಥಿನಿಯರು ಕರಾಟೆ ತರಬೇತಿ ಪಡೆಯುತ್ತಿದ್ದಾರೆ.

ಕರಾಟೆ ತರಬೇತಿ ವಿದ್ಯಾರ್ಜನೆಗೆ ಪೂರಕವಾಗಿದ್ದು, ಇದರಿಂದ ಸ್ವ ರಕ್ಷಣೆಯ ಜತೆಗೆ ಏಕಾಗ್ರತೆ, ಹುಮ್ಮಸ್ಸು ಅವಶ್ಯಕ. ಇದನ್ನು ಕರಾಟೆಯಿಂದ ಪಡೆಯಬಹುದು. ಸರಕಾರ 18 ಗಂಟೆಯ ಅವಧಿಯ ಬೇಸಿಕ್ ಶಿಕ್ಷಣ ಮಾತ್ರ ನೀಡುತ್ತಿದ್ದು, ವಿದ್ಯಾರ್ಥಿನಿಯರು ಇಚ್ಛಿಸಿದಲ್ಲಿ ಉಚಿತವಾಗಿ ಹೆಚ್ಚುವರಿ ತರಬೇತಿ ನೀಡಲು ಸಿದ್ದ ಎಂದು ಹೇಳುತ್ತಾರೆ ಕರಾಟೆ ಶಿಕ್ಷಕರಾಗಿರುವ ರಾಜಧನ್.