ತಂದೆಯ ಮೂವರು ಸ್ನೇಹಿತರಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿ ಸಾವು

ಸಾಂದರ್ಭಿಕ ಚಿತ್ರ

ಕೊಚ್ಚಿ : ತನ್ನ ತಂದೆಯ ಮೂವರು ಸ್ನೇಹಿತರಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದ 14ರ ಹರೆಯದ ಬಾಲಕಿ ಸೋಮವಾರದಂದು ಕೊಟ್ಟಾಯಂನಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಸಾವನ್ನಪ್ಪಿದ್ದಾಳೆ. ಕಳಮಶ್ಯೇರಿಯಲ್ಲಿರುವ ಅತ್ಯಂತ ಬಡತನದ ಕುಟುಂಬದಲ್ಲಿದ್ದ ಬಾಲಕಿ ಕಿಡ್ನಿ ವೈಫಲ್ಯದಿಂದ ಕೂಡಾ ಬಳಲುತ್ತಿದ್ದಳು. ಸೆ 14ರಂದು ಈಕೆಯ ತಂದೆಯ ಮೂವರು ಸ್ನೇಹಿತರಿಂದಲೇ ಈಕೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಳು.

ಮನೆಯಲ್ಲಿ ಪೋಷಕರು ಇಲ್ಲದ ವೇಳೆ ಮನೆಗೆ ಬಂದ ಮೂವರು ಈಕೆಯನ್ನು ಅತ್ಯಾಚಾರ ನಡೆಸಿದ್ದರು. ಆಘಾತಕ್ಕೆ ಒಳಾಗಿದ್ದ ಈಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

“ಈಕೆ ಮೆದುಳಿನ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದಾಳೆ. ಅತ್ಯಾಚಾರಕ್ಕೆ ಒಳಗಾಗಿದ್ದ ಆಕೆಗೆ ಘಟನೆ ಬಳಿಕ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದಳು. ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದ ಈಕೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ.

“ಈಕೆಯ ಸಾವಿಗೆ ಸಾಮೂಹಿಕ ಅತ್ಯಾಚಾರ ಅಥವಾ ಆಕೆಗೆ ಬಾಧಿಸಿದ ಖಾಯಿಲೆಯೇ ಕಾರಣವೇ ಎನ್ನುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ಈಕೆಯ ಕುಡುಕ ತಂಧೆಯೂ ತಿಂಗಳ ಹಿಂದೆ ಸಾವನ್ನಪ್ಪಿದ್ದಾನೆ. ನಾವು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಲಿದ್ದೇವೆ” ಎಂದು ಪೊಲೀಸರು ಹೇಳಿದ್ದಾರೆ.