ಸೆಂಟ್ರಿಂಗ್ ಕಾರ್ಮಿಕರಿಂದ ಬಾಲಕಿಗೆ ಲೈಂಗಿಕ ಕಿರುಕುಳ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಬಾಲಕಿಯನ್ನು ಹಿಂಬಾಲಿಸಿ ಆಕೆಯ ಜತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಹಾವೇರಿ ಮೂಲದ ಪ್ರವೀಣ (20) ಮತ್ತು ಮಹೇಶ (20) ಎಂಬವರನ್ನು ಕಾರ್ಕಳ ಗ್ರಾಮಾಂತರ ಪೋಲಿಸರು ಬಂಧಿಸಿದ್ದಾರೆ.

ಹಾವೇರಿ ಮೂಲದವರಾದ ಪ್ರವೀಣ ಹಾಗೂ ಮಹೇಶ್ ಎಂಬವರು ಬೆಳ್ಮಣ್ಣಿನ ಧರ್ಮಣ್ಣ ಎಂಬ ಗುತ್ತಿಗೆದಾರನ ಜತೆಗೆ ಸೆಂಟ್ರಿಂಗ್ ಕೆಲಸಕ್ಕೆ ಸೇರಿದ್ದು, ಬೆಳ್ಮಣ್ಣು ಸಮೀಪದ ಸೂಡಾ ಗ್ರಾಮದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ವೇಳೆ ಅದೇ ಪರಿಸರದ 17 ಹರೆಯದ ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದರು. ಬಾಲಕಿ ರಸ್ತೆಯಲ್ಲಿ ಓಡಾಡುತ್ತಿದ್ದ ವೇಳೆ ಈ ಯುವಕರು ಹಿಂಬಾಲಿಸಿ ಮೊಬೈಲ್ ಮೂಲಕ ಆಕೆಯ ಫೋಟೋ ತೆಗೆದು ಆಕೆಯನ್ನು ಚುಡಾಯಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ಹಿನ್ನೆಲೆಯಲ್ಲಿ ಭಯಗೊಂಡ ಆಕೆ ಮನೆಯವರಿಗೆ ವಿಚಾರ ತಿಳಿಸಿರುವ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಕಾರ್ಕಳ ಗ್ರಾಮಾಂತರ ಪೊಲೀಸರು ಆರೋಪಿಗಳಾದ ಮಹೇಶ್ ಹಾಗೂ ಪ್ರವೀಣ ಎಂಬವರನ್ನು ಬಂಧಿಸಿ, ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.