ಬಸ್ ಗುದ್ದಿ ಯುವತಿ ಗಂಭೀರ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ತಾಯಿ ಮತ್ತು ಮಗಳು ರಸ್ತೆ ಬದಿ ನಡೆದು ಹೋಗುತ್ತಿದ್ದ ವೇಳೆ ಸಿಟಿ ಬಸ್ಸೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮಗಳು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸಂತೆಕಟ್ಟೆ ಸಮೀಪದ ನೇಜಾರು ಕೆಇಬಿ ಕಚೇರಿ ಬಳಿ ಸಂಭವಿಸಿದೆ.

ಚಾಲಕ ಬಸ್ಸನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಸಂತೆಕಟ್ಟೆ ಸಮೀಪದ ನೇಜಾರು 10ನೇ ಅಡ್ಡರಸ್ತೆ ನಿವಾಸಿ ವಿನೋದಾ ರತ್ನಾಕರ ನಾಯ್ಕ್ ಎಂಬವರ ಮಗಳು ಸುಚೇತ ನಾಯ್ಕ್ (18) ಗಂಭೀರ ಗಾಯಗೊಂಡವರು. ವಿನೋದಾರೊಂದಿಗೆ ಮಗಳು ಸುಚೇತಾ ಸಂತೆಕಟ್ಟೆಯಿಂದ ಅವರ ಬಾಡಿಗೆ ಮನೆಯಾದ ನೇಜಾರು ಕಡೆಗೆ ರಸ್ತೆ ಬದಿಯಲ್ಲಿ ನಡೆದು ಬರುತ್ತಿದ್ದ ವೇಳೆ ನಂದಕಿಶೋರ್ ಎಂಬಾತ ಸಂತೆಕಟ್ಟೆ ಕಡೆಯಿಂದ ಕೆಮ್ಮಣ್ಣು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಸಿಟಿ ಬಸ್ ಹಿಂದಿನಿಂದ ಸುಚೇತಾಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಸುಚೇತಾ ಉಡುಪಿ ನಗರದ ಹೈಟೆಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ಬಸ್ ಚಾಲಕ ಪರಾರಿಯಾಗಿದ್ದು, ಆತನ ವಿರುದ್ಧ ಮಲ್ಪೆ ಠಾಣೆಯಲ್ಲಿ ಕೇಸು ದಾಖಲಾಗಿದೆ.