ಹಾಸನದ ಹುಡುಗಿ ರಾಜಸ್ಥಾನದಲ್ಲಿ ಮಾರಾಟ !

ಸಾಂದರ್ಭಿಕ ಚಿತ್ರ

ಕಳೆದ ವರ್ಷ ನಾಪತ್ತೆಯಾಗಿದ್ದ ಬಾಲಕಿ ಬಿಕಾನೇರಿನಲ್ಲಿ ಪತ್ತೆಯಾದಾಗ ಗರ್ಭಿಣಿ

ಹಾಸನ :  ಕಳೆದ ವರ್ಷದ ಸೆಪ್ಟೆಂಬರ್ 29ರಂದು ನಾಪತ್ತೆಯಾಗಿದ್ದ ತನ್ನ ಹದಿಹರೆಯದ ಪುತ್ರಿ ಸುಮಾಳಿಗಾಗಿ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಗೌರಮ್ಮ ಕಳೆದ 6 ತಿಂಗಳಲ್ಲಿ ಹುಡುಕದ ಸ್ಥಳವಿಲ್ಲ. ಪೊಲೀಸ್ ದೂರು ನೀಡಿದರೆ ಎಲ್ಲಿ ತನ್ನ ಮಗಳ ಮೇಲೆಯೇ ಇಲ್ಲದ ಆರೋಪ ಹೊರಿಸುವರೋ ಎಂದು ಹೆದರಿ ಆಕೆ ದೂರು ನೀಡಲು ಹಿಂಜರಿದಿದ್ದಳು.

ಪಿಯುಸಿ ತರಗತಿಯಲ್ಲಿ ಕಲಿಯುತ್ತಿದ್ದ ತನ್ನ ಪ್ರೀತಿಯ ಮಗಳನ್ನು ಮತ್ತೆ ಕಾಣಲು ಸಾಧ್ಯವೇ ಇಲ್ಲವೆನ್ನುವೆನ್ನುವಷ್ಟು ಅವಳು ಹತಾಶಳಾಗಿದ್ದಳು. ಆದರೆ ಈ ವರ್ಷದ ಮಾರ್ಚ್ ತಿಂಗಳಿನ ಒಂದು ದಿನ ಆಕೆಗೆ ಒಂದು ಅಜ್ಞಾತ ನಂಬರಿನಿಂದ ಕರೆ ಬಂದಿತ್ತು. ಕರೆ ಸ್ವೀಕರಿಸಿದರೆ ಅತ್ತ ಕಡೆಯಿಂದ ಸುಮಾ ಮಾತನಾಡುತ್ತಿದ್ದಳು. `ತಾನು ಚೆನ್ನಾಗಿದ್ದೇನೆ’ ಎಂದು ಹೇಳಿ ಕಾಲ್ ಕಟ್ ಮಾಡಿದ್ದಳು. ಮತ್ತೆ ಆ ನಂಬರಿಗೆ ಕರೆ ಮಾಡುವ ಪ್ರಯತ್ನ ಮಾಡಿದರೆ ಯಾವುದೇ ಪ್ರತಿಕ್ರಿಯೆಯಿರಲಿಲ್ಲ. ಕೆಲ ದಿನಗಳ ನಂತರ ಮತ್ತೆ ಕರೆ ಮಾಡಿದ ಆಕೆ ತಾನು ರಾಜಸ್ಥಾನದಲ್ಲಿರುವುದಾಗಿ ಹಾಗೂ ಹಿಂದೆ ಬರಲು ಇಚ್ಛಿಸುವುದಾಗಿ ಹೇಳಿದಳು. ಆದರೆ ಅಲ್ಪ ವೇತನ ಪಡೆಯುವ ಹಾಗೂ ಪತಿಯನ್ನು ಕೆಲವು ವರ್ಷಗಳ ಹಿಂದೆ ಕಳೆದುಕೊಂಡಿದ್ದ ಗೌರಮ್ಮಳಿಗೆ ಅಷ್ಟು ದೂರ ಹೋಗುವುದು ಅಸಾಧ್ಯವಾಗಿತ್ತು. ಮನೆಯಲ್ಲಿ ಆಕೆಯ ಕಿರಿಯ ಮಗ ಕೂಡ ಇದ್ದ. ಉಪಾಯ ಕಾಣದೇ ಮಾನವ ಕಳ್ಳಸಾಗಣೆ ತಡೆಗಾಗಿ ರಚಿಸಲಾಗಿರುವ ಜಿಲ್ಲಾ ವಿಚಕ್ಷಣಾ ದಳವನ್ನು ಸಂಪರ್ಕಿಸಿದ್ದಳು.

ಈ ಘಟನೆಯ ಬಗ್ಗೆ ಪತ್ರಿಕಾ ವರದಿಯೊಂದನ್ನು ಓದಿದ ಕರ್ನಾಟಕ ಹೈಕೋರ್ಟಿನ ನ್ಯಾಯಾಧೀಶರೊಬ್ಬರು ಪೊಲೀಸರು ಈ ವಿಚಾರ ತನಿಖೆ ನಡೆಸುವಂತೆ ನೊಡಿಕೊಂಡರು. ಸುಮಾ ಮಾಡಿದ ಫೋನ್ ಕರೆಯನ್ನಾಧರಿಸಿ ಎಎಸ್ಪಿ ಜ್ಯೋತಿ ವೈದ್ಯನಾಥನ್ ಅವರ ನೇತೃತ್ವದ ಪೊಲೀಸ್ ತಂಡ ಸಹಿತ 2 ತಂಡಗಳು ರಾಜಸ್ಥಾನಕ್ಕೆ ತೆರಳಿ ಅಲ್ಲಿ ಬಿಕಾನೇರ್ ನಗರದಲ್ಲಿ ಸುಮಾಳನ್ನು ಪತ್ತೆ ಹಚ್ಚಿದ್ದರು. ಆಕೆ ಗರ್ಭಿಣಿಯಾಗಿದ್ದಳು. ಆಕೆಯಿಂದ ದೊರೆತ ಮಾಹಿತಿ ಆಘಾತಕಾರಿಯಾಗಿತ್ತು.

ಮನೆಯಿಂದ ಹೊರಗಿದ್ದ ಏಳು ತಿಂಗಳಲ್ಲಿ ಆಕೆ ಸುಮಾರು 3,000 ಕಿಮೀ ದೂರ ಪ್ರಯಾಣಿಸಿದ್ದಳು. ತನಗೆ ಉತ್ತಮ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದ ಇಬ್ಬರು ಮಹಿಳೆಯರು ತನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರೆಂದು ಆಕೆ ಹೇಳಿದ್ದಾಳೆ. ತನ್ನ ತಾಯಿ ತನಗಾಗಿ ಕಷ್ಟಪಡುತ್ತಿರುವುದನ್ನು ನೋಡಿ ಏನನ್ನಾದರೂ ಸಾಧಿಸಬೇಕೆಂದು ಉದ್ಯೋಗ ಸೇರಲು ಇಚ್ಛಿಸಿದೆ ಎಂದು ಆಕೆ ಹೇಳಿಕೊಂಡಿದ್ದಳು. ಆದರೆ ಬೆಂಗಳೂರಿಗೆ ಹೋದ ನಂತರ ತಾನು ಮಾನವ ಕಳ್ಳಸಾಗಣೆ ಜಾಲದಲ್ಲಿ ಸಿಲುಕಿದ್ದೇನೆಂದು ಅರಿವಾಗಿತ್ತು. ಅಲ್ಲಿ ಆಕೆಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಲಾಗಿತ್ತು.

ಹಲವರು ಪುರುಷರು ಅಲ್ಲಿಗೆ ಬಂದು ಆಕೆಯನ್ನು ನೋಡಿ ಹೋಗಿದ್ದರು. ದೊಡ್ಡ ಮೊತ್ತ ಪಡೆದು ಆಕೆಯನ್ನು ಯಾರಿಗಾದರೂ ಮದುವೆ ಮಾಡಿಸುವ ಯೋಚನೆ ಆಕೆಯನ್ನು ಕರೆದುಕೊಂಡು ಬಂದವರದ್ದಾಗಿತ್ತು. ಬೆಂಗಳೂರಿನಿಂದ ಆಕೆಯನ್ನು ಚೆನ್ನೈಗೆ ಹಾಗೂ ನಂತರ ಅಲ್ಲಿಂದ ರಾಜಸ್ಥಾನಕ್ಕೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ವೃದ್ಧನೊಬ್ಬನೊಂದಿಗೆ ಆಕೆಯ ವಿವಾಹ ಮಾಡಿಕೊಡಲಾಯಿತು. ಆದರೆ ಆಕೆ ಆತನೊಡೆನೆ ಇರಲು ಒಪ್ಪದೇ ಇದ್ದಾಗ ಆತ ಆಕೆಯನ್ನು ತನಗೆ ಮಾರಿದ ಬ್ರೋಕರ್ ಬಳಿ ಬಿಟ್ಟುಬಿಟ್ಟ. ನಂತರ 23 ವರ್ಷದ ಯುವಕನೊಬ್ಬನೊಂದಿಗೆ ಆಕೆಯ ವಿವಾಹ ಮಾಡಿಕೊಡಲಾಗಿತ್ತು. ಈತ ಬ್ರೋಕರುಗಳಿಗೆ ರೂ 3 ಲಕ್ಷ ಪಾವತಿಸಿದ್ದನೆಂದು ತಿಳಿದುಬಂದಿತ್ತು. 17 ವರ್ಷದ ಸುಮಾ ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸುವ ಬಾಲಕಿಯರ ನಿಲಯದಲ್ಲಿ ಆಶ್ರಯ ಪಡೆದಿದ್ದಾಳೆ.

ಗೌರಮ್ಮಳಿಗೆ ಈಗ ತನ್ನ ಮಗಳ ಭವಿಷ್ಯದ ಬಗ್ಗೆ ಚಿಂತೆಯಾಗಿದೆ. ಸುಮಾಳಂತೂ ತಾನು ಮಗುವನ್ನು ಹೆರುವುದಾಗಿ ಹೇಳುತ್ತಿದ್ದಾಳಲ್ಲದೆ ತನ್ನ ಪತಿ ಹಾಗೂ ಆತನ ತಾಯಿ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆಂದೂ ಹೇಳಿದ್ದಾಳೆ. ತನ್ನ ಪುತ್ರಿಯನ್ನು ನಂಬಿಸಿ ತನ್ನಿಂದ ಆಕೆಯನ್ನು ದೂರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುವ ಗೌರಮ್ಮ ಆಕೆಯ ಪುತ್ರಿಯ ಗಂಡ ಹಾಗೂ ಅತ್ತೆಯ ಬಗ್ಗೆ ಮೃದುಧೋರಣೆ ಹೊಂದಿದ್ದಾಳೆ. ಸುಮಾಳನ್ನು ಖರೀದಿಸಿದ್ದ ಅವರಿಬ್ಬರನ್ನು ಬಂಧಿಸಲಾಗಿದೆ. ಈ ಮಾನವ ಕಳ್ಳಸಾಗಾಟ ಜಾಲದ ಹಿಂದಿರುವ ಬ್ರೋಕರುಗಳ ಪತ್ತೆಗೆ ಬಲೆ ಬೀಸಲಾಗಿದೆ. ರಾಜಸ್ಥಾನದಲ್ಲಿ ಲಿಂಗಾನುಪಾತ ಕಡಿಮೆಯಿರುವುದರಿಂದ ಮಾನವ ಕಳ್ಳ ಸಾಗಾಟಗಾರರಿಗೆ ಅಲ್ಲಿ ಸಾಕಷ್ಟು ಬೇಡಿಕೆಯಿದೆ ಎನ್ನಲಾಗುತ್ತಿದೆ.