ರೈಲ್ವೇ ನಿಲ್ದಾಣಕ್ಕೆ ಕಲ್ಲೆಸೆದು ಬಾಲಕಿಗೆ ಪೆಟ್ಟು

ಸ್ಟೇಷನ್ ಮಾಸ್ಟರ್ ಕೋಣೆಯಲ್ಲಿ ಜಮಾಯಿಸಿದ ಆಕ್ರೋಶಿತ ಪ್ರಯಾಣಿಕರು

2ನೇ ಟ್ರ್ಯಾಕಿನಲ್ಲಿ ಟ್ರೇನ್ ನಿಲ್ಲಿಸಿದ್ದಕ್ಕೆ ಪ್ರಯಾಣಿಕರ ಆಕ್ರೋಶ, ಮುಲ್ಕಿ ಸ್ಟೇಷನ್ ಮಾಸ್ಟರ್ ತರಾಟೆಗೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ರೈಲ್ವೇ ನಿಲ್ದಾಣಕ್ಕೆ ರೈಲಿನಲ್ಲಿದ್ದ ಪ್ರಯಾಣಿಕರಿಬ್ಬರು ಕಲ್ಲೆಸೆದಿದ್ದು, ಕಲ್ಲು ನಿಲ್ದಾಣದ ಮಾಡಿಗೆ ತಾಗಿ ಸಿಮೆಂಟ್ ಮಾಡಿನ ತುಂಡು ರೈಲು ನಿಲ್ದಾಣದಲ್ಲಿ ಕುಳಿತ್ತಿದ್ದ ಮಗುವಿನ ಮೇಲೆ ಬಿದ್ದು ಬಾಲಕಿ ಗಾಯಗೊಂಡ ಘಟನೆ ಭಾನುವಾರ ರಾತ್ರಿ 8ರ ಸುಮಾರಿಗೆ ನಡೆದಿದೆ. ಗಾಯಗೊಂಡ ಬಾಲಕಿಯನ್ನು ಮುಲ್ಕಿ ಕ್ಷೀರಸಾಗರ ಬಳಿಯ ಭೂಮಿಕಾ (9) ಎಂದು ಗುರುತಿಸಲಾಗಿದೆ. ಘಟನೆಯಿಂದ ಆಕ್ರೋಶಗೊಂಡ ಸುಮಾರು 40 ಜನ ಪ್ರಯಾಣಿಕರು ರೈಲ್ವೇ ಸ್ಟೇಷನ್ ಮಾಸ್ಟರ್ ಕುಲಶೇಖರರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಗಾಯಗೊಂಡ ಬಾಲಕಿಗೆ ಚಿಕಿತ್ಸೆ ನೀಡಲಾಯಿತು
ಗಾಯಗೊಂಡ ಬಾಲಕಿಗೆ ಚಿಕಿತ್ಸೆ ನೀಡಲಾಯಿತು

ಮುಲ್ಕಿಯ ಬಪ್ಪನಾಡು ಸಮೀಪದ ನಿವಾಸಿಗಳಾದ ಸುಮಾರು 40 ಜನ ಮುರುಡೇಶ್ವರ ಪ್ರವಾಸ ಮುಗಿಸಿ ಮಡಗಾಂವ್-ಮಂಗಳೂರು ರೈಲಿನಲ್ಲಿ ಬಂದಿದ್ದು, ಮುಲ್ಕಿ ನಿಲ್ದಾಣದ ಎರಡನೇ ಟ್ರಾಕಿನಲ್ಲಿ ರೈಲನ್ನು ಅದರ ಚಾಲಕ ನಿಲ್ಲಿಸಿದ್ದ. ಇದೇ ರೈಲಲ್ಲಿ ಮುಲ್ಕಿ ಸಮೀಪದ ಬಪ್ಪನಾಡಿನ ಪತಂಜಲಿ ಯೋಗ ಶಾಲೆಯ ಸುಮಾರು 40 ಜನ ಪ್ರಯಾಣಿಕರು ಇದ್ದರು. ಒಟ್ಟು ಸೇರಿ ಸುಮಾರು 80 ಜನ ಪ್ರಯಾಣಿಕರು ಎರಡನೇ ಟ್ಯಾಕಿನಲ್ಲಿಳಿದು ಮೊಲನೇ ಫ್ಲಾಟ್ ಫಾರ್ಮಿಗೆ ಬರಲು ಒದ್ದಾಡಬೇಕಾಯಿತು. ವಯೋವೃದ್ಧರೇ ಇದ್ದ ಪ್ರಯಾಣಿಕರ ತಂಡವು ಕತ್ತಲಲ್ಲಿ ನಡೆದು ಬರಲು ತ್ರಾಸಪಡಬೇಕಾಯಿತ್ತಲ್ಲದೆ ಕೊಳಚಿಕಂಬಳ ಬಳಿಯ ನಿವಾಸಿ ಲತಾ ಸಹಿತ ಹಲವರಿಗೆ ಗಂಭೀರ ಉಳುಕು ಗಾಯಗಳಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ, ಮೊದಲ ಫ್ಲಾಟ್ ಫಾರ್ಮ್ ಖಾಲಿ ಇದ್ದರೂ ಎರಡನೇ ಟ್ರಾಕಿನಲ್ಲಿ ನಿಲ್ಲಿಸಿದ್ದ ಬಗ್ಗೆ ಸ್ಟೇಷನ್ ಮಾಸ್ಟರನ್ನು ತರಾಟೆಗೆ ತೆಗೆದುಕೊಂಡರು. ಈ ನಡುವೆ ಪ್ರಯಾಣಿಕರು ಕತ್ತಲಲ್ಲಿ ರೈಲ್ವೇ ಟ್ರಾಕಿನಲ್ಲಿ ನಡೆದು ಬರುತ್ತಿದ್ದ ವೇಳೆ ರೈಲಿನಲ್ಲಿದ್ದ ಇಬ್ಬರು ಯುವಕರ ಪೈಕಿ ಒಬ್ಬ ಮುಲ್ಕಿ ರೈಲ್ವೇ ನಿಲ್ದಾಣಕ್ಕೆ ಕಲ್ಲೆಸೆದಿದ್ದಾರೆ. ಅದು ನಿಲ್ದಾಣದ ಶೀಟಿಗೆ ಬಿದ್ದು, ಅದು ತುಂಡಾಗಿ ಆಗತಾನೆ ರೈಲಿನಿಂದ ಬಂದು ಆಯಾಸದಿಂದ ಕುಳಿತ್ತಿದ್ದ ಬಾಲಕಿ ಮೇಲೆ ಬಿದ್ದು, ಆಕೆಯ ಹಣೆಗೆ ಗಾಯವಾಯಿತು. ಪರಿಸ್ಥಿತಿ ಹದಗೆಡುತ್ತಿರುವುದನ್ನು ಕಂಡ ಕೂಡಲೇ ಮುಲ್ಕಿ ಪೊಲೀಸರು ಹಾಗೂ ನಗರ ಪಂಚಾಯತ್ ಅಧ್ಯಕ್ಷ ಸುನಿಲ್ ಆಳ್ವ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿ ರೈಲ್ವೇ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ತಕ್ತಪಡಿಸಿದರು. ಘಟನೆಯಲ್ಲಿ ಗಾಯಗೊಂಡ ಮಗುವಿಗೆ ಕೂಡಲೇ ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.

2ನೇ ಫ್ಲಾಟ್ ಫಾರ್ಮಿಗೆ ಆಗ್ರಹ

ಘಟನೆ ಬಳಿಕ ಮಾತಿನ ಚಕಮಕಿ ನಡೆದು ಪ್ರಯಾಣಿಕರು ತಮಗಾದ ತೊಂದರೆ ಬಗ್ಗೆ ರೈಲ್ವೇಯಲ್ಲಿ ದೂರು ದಾಖಲಿಸಿದ್ದಾರೆ. ಮುಲ್ಕಿ ರೈಲ್ವೇ ನಿಲ್ದಾಣದಲ್ಲಿ ಎರಡನೇ ಫ್ಲಾಟ್ ಫಾರ್ಮ ಅವಶ್ಯಕತೆ ಇದೆ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಕಗ್ಗತ್ತಲು ತುಂಬಿರುವ ಎರಡನೇ ಟ್ರಾಕಿನಿಂದ ಮೊದಲನೇ ಫ್ಲಾಟ್ ಫಾರ್ಮಿಗೆ ಬರಲು ತ್ರಾಸದಾಯಕವಾಗುತ್ತಿದ್ದು, ಕೂಡಲೇ ಕ್ರಮಕೈಗೊಳ್ಳುವಂತೆ ಹಾಗೂ ತಮಗಾದ ತೊಂದರೆ ಬಗ್ಗೆ ಗಮನಹರಿಸುವಂತೆ ರೈಲ್ವೇ ಸಚಿವರ ಗಮನಸೆಳೆಯಬೇಕೆಂದು ಪ್ರಯಾಣಿಕರಾದ ಲತಾ ಆಗ್ರಹಿಸಿದ್ದಾರೆ.