ಗೆಳತಿಯ ಕಸಿನ್ ನನ್ನ ಬಾಯ್ಫ್ರೆಂಡ್, ಆದರೆ…

ಪ್ರ : ನನಗೀಗ 19 ವರ್ಷ. ನನಗೆ ಹುಡುಗರ ಮೇಲೆ ಬಹುಬೇಗ ಕ್ರಶ್ ಉಂಟಾಗುತ್ತದೆ. ಆದರೆ ಅವರ ಜೊತೆ ಸ್ವಲ್ಪ ಆತ್ಮೀಯತೆ ಬೆಳೆಯುತ್ತದೆ ಅನ್ನುವಷ್ಟರಲ್ಲಿ ಅವರು ನನ್ನಿಂದ ದೂರ ಹೋಗಿಬಿಡುತ್ತಾರೆ. ಸ್ವಲ್ಪ ದಿನ ನನ್ನ ಜೊತೆ ಸರಿಯಾಗಿಯೇ ಇರುತ್ತಾರೆ. ಕೆಲವು ಸಮಯದಲ್ಲಿಯೇ ಬೇರೆ ಹುಡುಗಿಯರು ಅವರನ್ನು ಬುಟ್ಟಿಗೆ ಹಾಕಿಕೊಂಡು ಬಿಡುತ್ತಾರೆ. ನನ್ನಲ್ಲಿ ಯಾವ ಕೊರತೆಯಿದೆ ಅಂತಲೇ ನನಗೆ ಅರ್ಥವಾಗುತ್ತಿಲ್ಲ. ನೋಡಲು ಚೆನ್ನಾಗಿಯೇ ಇದ್ದೇನೆ. ಮಾಡ್ ಡ್ರೆಸ್ ಕೂಡಾ ಮಾಡುತ್ತೇನೆ. ಆದರೂ ಅವರಿಗೆಲ್ಲ ನಾನು ಇಷ್ಟವಾಗದಿದ್ದುದು ಬೇಸರ ತರಿಸುತ್ತಿತ್ತು. ಆದರೆ ಈಗೊಬ್ಬ ಹುಡುಗ ಸಿಕ್ಕಿದ್ದಾನೆ. ಅವನು ನನ್ನ ಗೆಳತಿಯ ಕಸಿನ್. ಅವಳ ಬರ್ತ್‍ಡೇ ಪಾರ್ಟಿಗೆ ಹೋದಾಗ ಅವನ ಪರಿಚಯವಾಯಿತು. ಈಗ ಫೇಸ್‍ಬುಕ್ಕಿನಲ್ಲಿ ಫ್ರೆಂಡ್ಸ್ ಆಗಿದ್ದೇವೆ. ಇಂಟರ್ನೆಟ್ಟಿನಲ್ಲಿ ಚಾಟ್ ಮಾಡುತ್ತಿರುತ್ತೇವೆ. ಮೂರ್ನಾಲ್ಕು ಸಲ ಡೇಟಿಂಗ್ ಕೂಡಾ ಮಾಡಿದ್ದೇವೆ. ಇವನು ನನಗೆ ಸರಿಯಾದವನು ಅನಿಸುತ್ತಿದೆ. ಮೊದಲಿನ ಹುಡುಗರ ಹಾಗೆ ನನಗೆ ಕೈಕೊಟ್ಟು ಹೋಗಲಿಕ್ಕಿಲ್ಲ. ಆದರೆ ಒಂದೇ ಸಮಸ್ಯೆಯೆಂದರೆ ನನ್ನ ಗೆಳತಿಗೆ ನಮ್ಮಿಬ್ಬರ ಲವ್ ವಿಷಯ ಗೊತ್ತಿಲ್ಲ. ಆಕೆಗೆ ನನ್ನ ಮೊದಲಿನ ಕ್ರಶ್‍ಗಳೆಲ್ಲ ಗೊತ್ತು. ಅವಳ ಕಸಿನ್ ಈಗ ನನ್ನ ಬಾಯ್‍ಫ್ರೆಂಡ್ ಅಂತ ಗೊತ್ತಾದರೆ ಅವಳು ನನ್ನ ಹಿಂದಿನ ವಿಷಯವನ್ನೆಲ್ಲ ಆತನಿಗೆ ಹೇಳಿದರೆ Éನ್ನುವ ಆತಂಕ ಕಾಡುತ್ತಿದೆ. ಇವನೂ ನನ್ನನ್ನು ತ್ಯಜಿಸಿ ಹೋದರೆ ನನಗೆ ತುಂಬಾ ದುಃಖವಾಗುತ್ತದೆ. ನಾನೀಗ ಏನು ಮಾಡಲಿ?

: ನೀನಿನ್ನೂ ಟೀನೇಜರ್. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ನಿನಗೆ ಅನೇಕ ಹುಡುಗರ ಮೇಲೆ ಕ್ರಶ್ ಉಂಟಾಯಿತು ಅಂದರೆ ನಿನಗೆ ತಲೆಯಲ್ಲಿ ಲವ್ ಬಿಟ್ಟರೆ ಬೇರೇನು ತಿರುಗುವುದಿಲ್ಲ ಅಂತ ಆಯಿತು. ಪ್ರೀತಿಯನ್ನು ಆ ರೀತಿ ಅತಿಯಾಗಿ ಹಿಂಬಾಲಿಸಿ ಹೋಗುವುದು ಸರಿಯಲ್ಲ. ನೀನು ಈ ರೀತಿ ಹುಡುಗನನನ್ನು ಸ್ನೇಹಿತನಾದ ಕೂಡಲೇ ತುಂಬಾ ಹಚ್ಚಿಕೊಂಡು ಬಿಡುತ್ತೀ ಅನ್ನುವ ಕಾರಣಕ್ಕೇ ಬಹುಶಃ ಕೆಲವು ಹುಡುಗರು ನಿನ್ನಿಂದ ದೂರ ಹೋಗಿರಬಹುದು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಕಮಿಟ್ ಆಗಲು ಹೆಚ್ಚಿನ ಹುಡುಗರು ತಯಾರಿರುವುದಿಲ್ಲ. ಈಗಿನ ನಿನ್ನ ಬಾಯ್‍ಫ್ರೆಂಡ್ ಬಹುಶಃ ನಿನ್ನ ಹಾಗಿನ ಗುಣದವನೇ ಇರಬೇಕು. ಅವನೂ ನಿನ್ನನ್ನು ಬಹಳ ಇಷ್ಟಪಡುತ್ತಿರುವುದರಿಂದ ಅವನು ಅಷ್ಟು ಬೇಗ ನಿನ್ನಿಂದ ದೂರವಾಗಲಾರ. ನಿನ್ನ ಗೆಳತಿಯನ್ನು ಈ ವಿಷಯದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಒಳ್ಳೆಯದು. ಅವಳೇ ನಿಮ್ಮಿಬ್ಬರ ಪ್ರೇಮಕ್ಕೆ ಸೇತುವೆಯಾಗಬೇಕೆಂದು ನೀನು ಅವಳನ್ನು ರಿಕ್ವೆಸ್ಟ್ ಮಾಡಿಕೊಂಡರೆ ಅವಳು ನಿನ್ನ ಜೀವನದ ಜೊತೆ ಚೆಲ್ಲಾಟವಾಡಲಾರಳು. ಆದರೂ ನಿನಗೊಂದು ಕಿವಿಮಾತು ಅಂದರೆ ಇದೀಗ ಓದು ಮತ್ತು ಕರೀಯರ್ ಬಗ್ಗೆ ಗಮನ ಕೊಡಬೇಕಾದ ಕಾಲ. ಮುಂದೆ ಲವ್, ಮದುವೆ, ಮಕ್ಕಳು ಎಲ್ಲ ಇದ್ದಿದ್ದೇ.