ಲಾರಿಯಡಿಗೆ ಬಿದ್ದ ಬಾಲಕಿ ದುರ್ಮರಣ

ಕಟಪಾಡಿಯಲ್ಲಿ ಬಸ್-ಬೈಕ್ ಡಿಕ್ಕಿ  ಟಿ ಚತುಷ್ಪಥ ಅವ್ಯವಸ್ಥೆಗಳಿಗೆ ಸಾರ್ವಜನಿಕರ ಆಕ್ರೋಶ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಪ್ರಯಾಣಿಕರನ್ನು ಹತ್ತಿಸಲು ಹೆದ್ದಾರಿಯಲ್ಲೇ ನಿಲ್ಲಿಸಲಾದ ಖಾಸಗಿ ಬಸ್ಸನ್ನು ಚಾಲಕ ಏಕಾಏಕಿ ಬಲಕ್ಕೆ ತಿರುಗಿಸಿ ಚಲಾಯಿಸಿದ ಪರಿಣಾಮ ಬಲ ಬದಿಯಲ್ಲಿ ಚಲಿಸುತ್ತಿದ್ದ ಬೈಕಿಗೆ ಡಿಕ್ಕಿಯಾಗಿ, ಬೈಕ್ ಮುಗುಚಿ ರಸ್ತೆಗೆ ಬಿದ್ದಾಗ ಹಿಂಬದಿ ಸವಾರೆ ಬಾಲಕಿ ಮೇಲೆ ಹಿಂದಿನಿಂದ ಬರುತ್ತಿದ್ದ ಲಾರಿ ಚಲಿಸಿದ ಪರಿಣಾಮ ಬಾಲಕಿ ದಾರುಣವಾಗಿ ಮೃತಪಟ್ಟ ಘಟನೆ ಕಟಪಾಡಿ ಪೇಟೆ ಬಳಿ ಹೆದ್ದಾರಿಯಲ್ಲಿ ಸಂಭವಿಸಿದೆ.

ಕಟೀಲು ಸಮೀಪದ ಅಜಾರು ನಿವಾಸಿ ಶಕುಂತಲಾ-ವಸಂತ ಆಚಾರ್ಯ ದಂಪತಿ ಪುತ್ರಿ ಸುಶ್ಮಿತಾ (11) ಮೃತ ಬಾಲಕಿ. ತನ್ನ ತಾಯಿಯ ಬಾವನೊಂದಿಗೆ ಕಟೀಲಿನ ಮನೆಯಿಂದ ಉದ್ಯಾವರಕ್ಕೆ ಹೋಗುತ್ತಿದಾಗ ನಡೆದ ಅಪಘಾತಕ್ಕೆ ಬಾಲಕಿ ಬಲಿಯಾಗಿದ್ದಾಳೆ.

ಇವರಿಗೆ ಸಂಬಂಧಪಟ್ಟ ಉದ್ಯಾವರದ ಸೈಟೊಂದರಲ್ಲಿ ಕೆಲಸ ನಡೆಯುತ್ತಿದ್ದು, ಅಲ್ಲಿ ಸುಶ್ಮಿತಾ ತಂದೆ ಕೂಡಾ ಇದ್ದರು. ಆ ಸೈಟಿಗೆ ತೆರಳುತ್ತಿದ್ದ ಸಂಬಂಧಿಯೊಂದಿಗೆ ತಾನು ಬರುವುದಾಗಿ ಬಾಲಕಿ ಹಟಹಿಡಿದು ಹೊರಟಿದ್ದಳು ಎನ್ನಲಾಗಿದೆ. ಕಟಪಾಡಿ ಪೇಟೆಗೆ ಬರುತ್ತಿದಂತೆ ಹೆದ್ದಾರಿ ಮಧ್ಯದಲ್ಲೇ ಖಾಸಗಿ ಬಸ್ ನಿಂತಿದ್ದು, ಅದನ್ನು ಹಿಂದಿಕ್ಕಿ ಮುಂದೆ ಹೋಗ ಬೇಕೆನ್ನುವಷ್ಟರಲ್ಲಿ ಬಸ್ ಚಲಿಸಿ ಬೈಕಿಗೆ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಬೈಕ್ ಸವಾರ

ನಾರಾಯಣ ಆಚಾರಿ (45) ಎಡಭಾಗಕ್ಕೆ ಬಿದ್ದು ಪಾರಾದರೆ, ನತದೃಷ್ಟೇ ಬಾಲಕಿ ಬಲ ಭಾಗಕ್ಕೆ ಬಿದ್ದ ತಕ್ಷಣ ಹಿಂದಿನಿಂದ ಬರುತ್ತಿದ್ದ ಲಾರಿಗೆ ಸಿಲುಕಿ ಕೆಲವೇ ಕ್ಷಣದಲ್ಲಿ ಇಹಲೋಕ ತ್ಯಜಿಸಿದ್ದಾಳೆ.

ಅವ್ಯಸ್ಥೆಗಳ ಆಗರ ಕಟಪಾಡಿ ಪೇಟೆ ಸಮೀಪ ಹೆದ್ದಾರಿಗೆ ಅಂಡರ್ ಪಾಸ್ ಬೇಕೆಂಬುದಾಗಿ ಬಹಳಷ್ಟು ಹೋರಾಟಗಳು ನಡೆಯಿತು. ಸ್ಥಳಕ್ಕೆ ಬಂದ ಪ್ರಮುಖ ಅವಳಿ ಪಕ್ಷಗಳ ರಾಜಕೀಯ ನಾಯಕರುಗಳು ಅಂಡರ್ ಪಾಸ್ ಬೇಡಿಕೆ ಈಡೇರಿಸುವ ಭರವಸೆ ನೀಡಿ ಮರೆಯಾದವರು ಈವರೆಗೂ ಪತ್ತೆಯಾಗಿಲ್ಲ. ಇತ್ತ ಹೋರಾಟ ನಡೆಸಿದ ಮಹಾಶಯರ ಹೋರಾಟದ ಕಿಚ್ಚು ಕೂಡಾ ತಣ್ಣಗಾಗಿದೆ. ಆ ಕಾರಣದಿಂದ ಈ ಪ್ರದೇಶ ಪ್ರಯಾಣಿಕರಿಗೆ ಹಾಗೂ ಪಾದಚಾರಿಗಳಿಗೆ ಕಂಟಕವಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪ.

 ಅಪಾಯಕಾರಿ ಬಸ್ ತಂಗುದಾಣ ಬದಲಿಸಿ

ಬಸ್ಸುಗಳು ಹೆದ್ದಾರಿ ಮಧ್ಯಭಾಗದಲ್ಲೇ ಪ್ರಯಾಣಿಕರನ್ನು ಹತ್ತಿಸುವುದು ಇಳಿಸುವುದು ಮಾಡುತ್ತಿದ್ದು, ಅಪಾಯವನ್ನು ಕೈಬೀಸಿ ಕರೆಯುವಂತಿದೆ. ಈ ಬಗ್ಗೆ ಹೆದ್ದಾರಿ ಇಲಾಖೆ ತಕ್ಷಣವೇ ಕ್ರಮಕೈಗೊಂಡು ಸೂಕ್ತ ಸ್ಥಳದಲ್ಲಿ ಬಸ್ ತಂಗುದಾಣ ನಿರ್ಮಿಸಿ ಮುಂದೆ ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿಸುವಂತೆ ಸಾರ್ವಜನಿಕರು ಹೆದ್ದಾರಿ ಇಲಾಖೆಯನ್ನು ಆಗ್ರಹಿಸಿದ್ದಾರೆ.