ಫಾಸ್ಟ್ ಫುಡ್ ಮಾಲಕಿ ಅವಾಂತರದಿಂದ ಕಾದ ಬಿಸಿ ಎಣ್ಣೆ ಬಿದ್ದ ಬಾಲಕಿ ಗಂಭೀರ

ಕರಾವಳಿ ಅಲೆ ವರದಿ

ಮಂಗಳೂರು : ಬೀದಿ ಬದಿ ಪಕೋಡ, ಪೋಡಿ ಮಾರಾಟ ಮಾಡುವ ಫಾಸ್ಟ್ ಫುಡ್ ವ್ಯಾಪಾರಿ ಮಹಿಳೆಯೊಬ್ಬರ ಬೇಜವಾಬ್ದಾರಿಯಿಂದಾಗಿ ಬಿಸಿ ಎಣ್ಣೆ ಬಾಲಕಿ ಕಾಲಿಗೆ ಬಿದ್ದು ಆಕೆ ಸುಟ್ಟ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈ ಘಟನೆ ನಡೆದಿರೋದು ಮಂಗಳೂರು ನಗರ ಹೃದಯಭಾಗದ ಸೆಂಟ್ರಲ್ ಮಾರುಕಟ್ಟೆ. ಗಂಭೀರ ಗಾಯಗೊಂಡಿರುವ ಬಾಲಕಿ ಅಮಂಡಾ (14) ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಬಜ್ಜೋಡಿ ಬಿಕರ್ನಕಟ್ಟೆ ನಿವಾಸಿ ವಿಕ್ಟರ್ ಡಿಸೋಜಾ ಪುತ್ರಿ ಅಮಂಡಾ ಜೊತೆ ಕೇಂದ್ರ ಮಾರುಕಟ್ಟೆಗೆ ತರಕಾರಿ, ಹಣ್ಣುಹಂಪಲು ಖರೀದಿಸಲು ತೆರಳಿದ್ದರು. ಈ ಸಂದರ್ಭ ಬೀದಿಬದಿಯ ಫಾಸ್ಟ್ ಫುಡ್ ಮಾಲಕಿ ತಿಂಡಿಕಾಯಿಸಿದ ಎಣ್ಣೆಯನ್ನು ಬಾಣಲೆಯಲ್ಲಿ ಹಿಡಿದುಕೊಂಡು

ಹೋಗುತ್ತಿದ್ದು, ಈ ಬಾಣಲೆ ತಾಗಿ ಅದರಲ್ಲಿದ್ದ ಎಣ್ಣೆ ಅಮಂಡಾ ತೊಡೆಯ ಭಾಗಕ್ಕೆ ಚೆಲ್ಲಿದೆ. ತೊಡೆಯಿಂದ ಕಾಲಿನ ಪಾದದವರೆಗೂ ಕ್ಷಣಮಾತ್ರದಲ್ಲಿ ಬೊಬ್ಬೆ ಎದ್ದಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ.

ಸೈಂಟ್ ಆಗ್ನೇಸ್ ಬೆಂದೂರಲ್ಲಿ ವಿದ್ಯಾರ್ಜನೆ ಮಾಡುವ ಅಮಂಡಾ ಈ ವರ್ಷ ಅಂತಿಮ ಪರೀಕ್ಷೆಗೆ ಕುಳಿತುಕೊಳ್ಳಬೇಕಾಗಿತ್ತು. ಆದರೆ ಈ ಘಟನೆಯಿಂದ ಆಕೆ ಪರೀಕ್ಷೆಗೆ ಕುಳಿತುಕೊಳ್ಳದಂತಾಗಿದೆ. ತಾನು ಮಾಡದ ತಪ್ಪಿಗೆ ಆಸ್ಪತ್ರೆಯ ಬೆಡ್ಡಿನಲ್ಲಿ ಕಣ್ಣೀರಿಡುತ್ತಿದ್ದಾಳೆ ಎಂದು ವಿಕ್ಟರ್ ಬಂದರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ಬಗ್ಗೆ ಕೂಡಲೇ ಕಾನೂನು ಕ್ರಮ ಕೈಗೊಂಡು ತಪ್ಪಿತಸ್ಥ ಫಾಸ್ಟ್ ಫುಡ್ ಮಾಲಕಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಅವರು ಆಗ್ರಹಿಸಿದ್ದಾರೆ. ಪೊಲೀಸರು ಘಟನೆ ಕುರಿತಂತೆ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ ಮಹಿಳೆಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಆದರೆ ಏನೂ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಇನ್ನು ಮುಂದೆ ನಗರದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಫಾಸ್ಟ್ ಫುಡ್ ಮಾಲಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಕ್ಟರ್ ಮಂಗಳೂರು ಮಹಾನಗರ ಪಾಲಿಕೆ ಮೇಯರ್, ಕಮಿಷನರ್, ಜಿಲ್ಲಾ ಆರೋಗ್ಯಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ.

 

 

LEAVE A REPLY