ಉಭಯ ರಾಜ್ಯ ಮುಖ್ಯಮಂತ್ರಿಗಳ ಸಮಕ್ಷಮದಲ್ಲಿ ಗೋವಿಂದ ಪೈ ಗಿಳಿವಿಂಡು ಸ್ಮಾರಕ ಲೋಕಾರ್ಪಣೆ

ಉಭಯ ರಾಜ್ಯ ಮುಖ್ಯಮಂತ್ರಿಗಳಿಂದ ಗೋವಿಂದ ಪೈ ಗಿಳಿವಿಂಡು ಸ್ಮಾರಕ ಉದ್ಘಾಟನೆಗೊಂಡಿತು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಗುರುವಾರ ಅಪರಾಹ್ನ ಕೇರಳ ಕರ್ನಾಟಕ ಗಡಿ ಪ್ರದೇಶವಾದ ಮಂಜೇಶ್ವರದಲ್ಲಿ ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ ಟ್ರಸ್ಟ್ ವತಿಯಿಂದ ಪುನರ್ ನವೀಕರಿಸಲಾದ ಗೋವಿಂದ ಪೈಗಳ ನಿವಾಸ, ಭವನಿಕಾ ರಂಗಮಂದಿರ, ಗಿಳಿವಿಂಡು ಸಾಂಸ್ಕತಿಕ ಕೇಂದ್ರ ಹಾಗೂ ಗೋವಿಂದ ಪೈ ಪ್ರತಿಮೆ ಅನಾವರಣ ಸಮಾರಂಭ ಐತಿಹಾಸಿಕವಾಗಿ ಕೇರಳದ ಸೀಎಂ ಪಿಣರಾಯಿ ಹಾಗೂ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮ್ಮಯ್ಯ ಸಮಕ್ಷಮ ಲೋಕಾರ್ಪಣೆಗೊಂಡಿದ್ದು, ಗಡಿನಾಡಿನ ಇತಿಹಾಸದ ಪುಟದಲ್ಲಿ ಹೊಸ ದಾಖಲೆ ನಿರ್ಮಿಸಿತು.

Gilivindu memorial

ಕೇರಳ ಕಂದಾಯ ಸಚಿವ ಇ ಚಂದ್ರಶೇಖರನ್ ಯಕ್ಷದೇಗುಲವನ್ನು ಸೋಗೆಯನ್ನು (ಯಕ್ಷಗಾನದ ಶಾಲು) ಬಿಡಿಸುವ ಮೂಲಕ ಮತ್ತು ಪಾರ್ತಿಸುಬ್ಬ ವೇದಿಕೆಯನ್ನು ಕರ್ನಾಟಕ ಅರಣ್ಯ ಸಚಿವ ರಮಾನಾಥ ರೈಯವರು ರಂಗಕ್ಕೆ ಪುಷ್ಪ ಎಸೆಯುವ ಮೂಲಕ ಉದ್ಘಾಟಿಸಿದರು. ಈ ವೇಳೆ ವೇದಿಕೆಯ ಪರದೆ ಸರಿದು ಹಿಮ್ಮೇಳದೊಂದಿಗೆ ಎರಡು ಅಬ್ಬರದ ವೇಷಗಳು ಏರು ಪದ್ಯಗಳೊಂದಿಗೆ ಪ್ರವೇಶ ನಡೆಸಿ ಅಚ್ಚರಿ ಮೂಡಿಸಿತು. ಸಮಾರಂಭದ ಬಳಿಕ ನಡೆದ ವೈಶಿಷ್ಟ್ಯಪೂರ್ಣ ಸಾಂಸ್ಕøತಿಕ ವೈವಿಧ್ಯ ಪ್ರಸ್ತುತಪಡಿಸಿದ ನಾಟ್ಯ ವೈಭವ ಸಂಚಲನ ಮೂಡಿಸಿತು.