ಸಮುದ್ರದ ಅಲೆಗಳು ನುಗ್ಗಿ ಹಾನಿ

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ : ವಾಯುಭಾರ ಕುಸಿತದಿಂದ ಉಂಟಾದ ಓಖಿ ಚಂಡಮಾರುತದ ಪರಿಣಾಮ ತಾಲೂಕಿನ ಕರ್ಕಿಯ ತೀರ ಪ್ರದೇಶದಲ್ಲಿ ರವಿವಾರ ತಡರಾತ್ರಿ ಸಮುದ್ರದ ಅಲೆಗಳು ನುಗ್ಗಿ ಹಾನಿಯುಂಟು ಮಾಡಿದೆ.

ತಾಲೂಕಿನ ಕರ್ಕಿ, ತೊಪ್ಪಲಕೇರಿ, ಕರ್ಕಿಕೋಡಿ, ಭಂಡಾರಕೇರಿ, ಹೆಗಡೆಹಿತ್ಲ ಮುಂತಾದ ಕಡಲತೀರ ಪ್ರದೇಶಗಳಲ್ಲಿ ಸಮುದ್ರದಲ್ಲಿನ ನೀರಿನ ಏರಿಳಿತಗಳಲ್ಲಿ ಹಿಂದೆಂದೂ ಕಾಣದ ವ್ಯತ್ಯಾಸ ಕಂಡುಬರುತ್ತಿದೆ ಎಂದು ತೊಪ್ಪಲಕೇರಿ ಭಾಗದ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನೀರಿನ ಅಲೆಗಳ ಅಬ್ಬರ ಹೆಚ್ಚಿನ ಪ್ರಮಾಣದಲ್ಲಿದ್ದು, ಅಲೆಗಳು ಕೆಲವು ಮನೆಗಳಿಗೆ ನುಗ್ಗಿವೆ. ತೊಪ್ಪಲಕೇರಿಯ ನಿವಾಸಿ ಶಂಕರ ದುರ್ಗಪ್ಪ ನಾಯ್ಕ ಹಾಗೂ ಮಾದೇವ, ಗಂಗಾಧರ ನಾಯ್ಕ ಹಾಗೂ ಇನ್ನೂ ಕೆಲವು ಮನೆಗಳಿಗೆ ನೀರು ನುಗ್ಗಿ ಸಣ್ಣ-ಪುಟ್ಟ ಹಾನಿ ಸಂಭವಿಸಿದೆ ಎನ್ನಲಾಗಿದೆ. ರವಿವಾರ ಮಧ್ಯರಾತ್ರಿ ಕಾಣಿಸಿಕೊಂಡ ಬಿರುಗಾಳಿ ಸಹಿತ ಚಂಡಮಾರುತ ಹಾಗೂ ಸಮುದ್ರದ ಅಲೆಗಳ ರಭಸಕ್ಕೆ ಬೆಚ್ಚಿ ಬಿದ್ದ ಅಲ್ಲಿನ ಕೆಲವು ನಿವಾಸಿಗರು ರಾತ್ರಿಯಿಡೀ ನಿದ್ದೆಗೆಡುವಂತಾಯಿತು.

ಶಂಕರ ನಾಯ್ಕ ಹಾಗೂ ಮಾದೇವ ಅವರ ಮನೆಗೆ ನೀರು ನುಗ್ಗಿರುವುದರಿಂದ ಇಬ್ಬರು ಕುಟುಂಬಸ್ಥರು ಮಧ್ಯರಾತ್ರಿ ಮನೆಯಿಂದ ದೂರವಿರಬೇಕಾಯಿತು. ಸಣ್ಣ ಮಕ್ಕಳು ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರೂ ಸಮೀಪದ ಎತ್ತರದ ಪ್ರದೇಶದಲ್ಲಿ ಉಳಿದು ದಿನ ಕಳೆದಿದ್ದಾರೆ. ಬಿರುಗಾಳಿ ಸಹಿತ ಸಮುದ್ರದ ಅಲೆಗಳು ಅಪ್ಪಳಿಸುವುದರ ಜೊತೆಗೆ ತೊಪ್ಪಲಕೇರಿ ಸಮೀಪದ ಒಂದು ವಿದ್ಯುತ್ ಕಂಬ ಮುರಿದುಬಿದ್ದಿದ್ದು, ಸೋಮವಾರ ಬೆಳಿಗ್ಗೆಯವರೆಗೂ ವಿದ್ಯುತ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು. ವಿಪರೀತ ಗಾಳಿಯಿಂದಾಗಿ ಮರದ ಟೊಂಗೆಗಳು ನೆಲಕ್ಕುರುಳಿದ್ದು, ಮುಂಗಾರು ಪ್ರವೇಶದ ನೆನಪು ಮತ್ತೆ ಮರುಕಳಿಸಿದಂತಾಯಿತು ಎಂದು ಅಲ್ಲಿಯ ಜನತೆ ಹೇಳಿಕೊಂಡಿದ್ದಾರೆ.

ಕೊಚ್ಚಿ ಹೋದ ತಡೆಗೋಡೆ ಕರ್ಕಿ, ತೊಪ್ಪಲಕೇರಿ, ಹೆಗಡೆಹಿತ್ಲ ಭಾಗದಲ್ಲಿ ಕಡಲ್ಕೊರೆತಕ್ಕೆ ಅಡ್ಡಲಾಗಿ ಹಾಕಲಾಗಿದ್ದ ತಡೆಗೋಡೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಇದರಿಂದ ಕೃಷಿ ಜಮೀನಿಗೂ ನೀರು ನುಗ್ಗಿ ಹಾನಿ ಸಂಭವಿಸಿದೆ. ಕಡಲ್ಕೊರೆತದಿಂದಾಗಿ ಕೆಲವು ಕಡೆ ಸಮುದ್ರ ದಂಡೆ ಮತ್ತು ಕೆಲವು ನಿವಾಸಿಗರ ಮನೆಯಂಗಳ ಸಮನಾಗಿದ್ದು ಯಾವುದೇ ಕ್ಷಣದಲ್ಲೂ ಅಪಾಯ ಸಂಭವಿಸುವ ಸಾಧ್ಯತೆಯಿದೆ ಎಂದು ಅಲ್ಲಿನ ನಿವಾಸಿಗಳು ಮಾಹಿತಿ ನೀಡಿದ್ದಾರೆ.

 

LEAVE A REPLY