ಬ್ಯಾಂಕಿನಿಂದ ನಗದು ಪಡೆಯುವುದೇ ರಾಜ್ಯ ಗ್ರಾಮೀಣರ ನಿತ್ಯದ ಗೋಳು !

ಹುಬ್ಬಳ್ಳಿ : ಪ್ರತಿನಿತ್ಯ ಹಣ ಪಡೆಯಲು ಬ್ಯಾಂಕಿನೆದುರು ಸರತಿಯಲ್ಲಿ ನಿಲ್ಲುವುದು ಹುಬ್ಬಳ್ಳಿ ಮತ್ತು ಕಲಘಟ್ಟಿ ತಾಲೂಕಿನ ಗ್ರಾಮಾಂತರ ಜನರಿಗೆ ನಿತ್ಯದ ಜೀವನವಾಗಿದೆ !

ನಗದು ಬರದಿಂದ ತತ್ತರಿಸಿರುವ ಇಲ್ಲಿನ ಅದರ್ಗುಂಚಿ ಗ್ರಾಮದ ಜನರು ಸುಮಾರು 8 ಕಿ ಮೀ ದೂರದ ಹುಬ್ಬಳ್ಳಿಗೆ ಪ್ರಯಾಣಿಸಿ ಬ್ಯಾಂಕುಗಳೆದುರು ಸಾಲುಗಟ್ಟಿ ನಿಲ್ಲುವಂತಾಗಿದೆ. ಈ ಗ್ರಾಮದಲ್ಲಿ ಕೇವಲ ಒಂದು ಎಟಿಎಂ ಇದ್ದು, ನೋಟು ಅಪಮೌಲ್ಯೀಕರಣ ಜಾರಿಗೆ ಬಂದ ಬಳಿಕ ಅದೂ ಕೂಡಾ ನವಂಬರ್ 8ರಿಂದ ಕಾರ್ಯವೆಸೆಗುತ್ತಿಲ್ಲ.

ಈ ಗ್ರಾಮದಲ್ಲಿ ಕಾರ್ಪೊರೇಶನ್ ಬ್ಯಾಂಕ್ ಶಾಖೆಯೊಂದಿದೆ. ಇದರಲ್ಲಿ ಸುಮಾರು 6,000 ಖಾತೆದಾರರಿದ್ದಾರೆ. ರಾಮನಲ್, ಗಂಗಿಹಾಲ್, ಚಾವರಗುಡ್ಡ, ಚನ್ನಪುರ ಮತ್ತು ತಿಮ್ಮಸಾಗರದವರ ಖಾತೆಗಳಿಲ್ಲಿವೆ. ಈ ಬ್ಯಾಂಕಿಗೆ ಪ್ರತಿದಿನ 200ಕ್ಕೂ ಅಧಿಕ ಮಂದಿ ಹಣ ಪಡೆಯಲು ಆಗಮಿಸುತ್ತಿದ್ದಾರೆ.

ನಾವಿಲ್ಲಿ ಹಣ ಪಡೆಯಲು ಗಂಟೆಗಟ್ಟಲೆ ಸರದಿಯಲ್ಲಿ ನಿಂತಿದ್ದೇವೆ. ಬೆಳಿಗ್ಗಿನಿಂದಲೇ ಜನರು ಸಾಲಿನಲ್ಲಿರುತ್ತಾರೆ ಎಂದು ಮಿಲ್ ಕಾರ್ಮಿಕರೊಬ್ಬರು ತಿಳಿಸಿದರು.

ಬ್ಯಾಂಕಿನಲ್ಲಿ ಸಾಕಷ್ಟು ಹಣವಿದೆ ಎಂದು ಬ್ಯಾಂಕ್ ಮ್ಯಾನೇಜರ್ ಹೇಳಿದ್ದಾರೆ. ಆದರೆ ಎಟಿಎಂ ಸ್ಥಗಿತಗೊಂಡಿರುವ ಬಗ್ಗೆ ಉತ್ತರಿಸಿಲ್ಲ.

ಮಿಶ್ರಿಕೋಟ ಗ್ರಾಮದಲ್ಲೀ ಇದೇ ಸ್ಥಿತಿ ಕಂಡು ಬಂದಿದೆ. ಇಲ್ಲಿನ ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕಿನಲ್ಲಿ `ನಗದಿಲ್ಲ’ ಎಂಬ ಬೋರ್ಡ್ ಅಳವಡಿಸಲಾಗಿದೆ. ಈ ಫಲಕವನ್ನು ನೋಟು ನಿಷೇಧದಂದೇ ಅಳವಡಿಸಲಾಗಿದೆ ಎಂದು ಬ್ಯಾಂಕಿನ ಸಹಾಯಕ ಪ್ರಬಂಧಕ ಕುಲಕರ್ಣಿ ತಿಳಿಸಿದರು.