ಲಂಚಾವತಾರದ ಹೈವೇದಲ್ಲಿ ಗಾಯತ್ರಿ ನಾಯಕ

ಅಧಿಕಾರಿಗಳ ಪಾಲಿಗೆ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಕೆಲಸವು ಲಂಚದ ಹೈವೇಯಾಗಿ ಕಾಣಿಸಿಕೊಂಡಿದೆ

 

ವಿಶೇಷ ವರದಿ

ಮಂಗಳೂರು : ಇದೇ ಮೊದಲ ಬಾರಿಗೆ ಬುದ್ಧಿವಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಾಯಕ ಆಯುಕ್ತರ ಮಟ್ಟದ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿಯೊಬ್ಬರು ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದು, ಜಿಲ್ಲಾಡಳಿತದ ಮುಖಕ್ಕೆ ಕ್ಯಾಕರಿಸಿ ಉಗಿದಂತಾಗಿದೆ.

ಇತ್ತೀಚೆಗೆ ತಹಶೀಲ್ದಾರ್ ಹುದ್ದೆಯಿಂದ ಸಹಾಯಕ ಆಯುಕ್ತೆಯಾಗಿ ಭಡ್ತಿ ಹೊಂದಿದ ಗಾಯತ್ರಿ ಎನ್ ನಾಯಕಗೆ ಅಗತ್ಯಕ್ಕೂ ಹೆಚ್ಚು ಮನ್ನಣೆ ನೀಡಿ ಕರೆತರಲಾಗಿದ್ದು, ಇದೀಗ ಜಿಲ್ಲೆಯ ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳನ್ನು ಸಂಶಯ ದೃಷ್ಟಿಯಿಂದ ಸಾರ್ವಜನಿಕರು ನೋಡುವಂತಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆಯಲ್ಲಿರುವ ಕೆಎಎಸ್ ಮಟ್ಟದ ಅಧಿಕಾರಿ ಇತ್ತೀಚಿಗಿನ ದಿನಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಕೈಗೆ ರೆಡ್ ಹ್ಯಾಂಡಾಗಿ ಲಂಚದ ಹಣದ ಸಮೇತ ಸಿಕ್ಕಿಬಿದ್ದಿರುವ ಉದಾಹರಣೆಗಳಿಲ್ಲ. ಈ ಹಿಂದೆ, ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಆಗಮಿಸಿದ ಹಿರಿಯ ಕೆಎಎಸ್ ಅಧಿಕಾರಿಯೊಬ್ಬರ ಕಾರ್ಯವೈಖರಿಗೆ ಮನಸೋತ ಜಿಲ್ಲೆಯ ಸಚಿವರ ಚೇಲಾಗಳು ಅವರನ್ನು ನೇರವಾಗಿ ಮಂಗಳೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರತಿಷ್ಠಾಪಿಸುವ ಮೂಲಕ ಬಹುದೊಡ್ಡ ಉತ್ಸವವನ್ನೇ ಆಚರಿಸಿದ್ದರು.

ಅದೇ ಹುದ್ದೆಗೆ ಆಗಮಿಸಿದ ಗಾಯತ್ರಿ ಎನ್ ನಾಯಕರನ್ನು ಕೂಡ ಇದೇ ರೀತಿ ಪುರಸ್ಕರಿಸಲಾಯಿತು. ಮಂಗಳೂರು  ನಗರಾಭಿವೃದ್ಧಿ ಪ್ರಾಧಿಕಾರದಿಂದ ನಜೀರ್ ವರ್ಗಾವಣೆಗೊಂಡಾಗ ಜಿಲ್ಲೆಯಲ್ಲಿದ್ದ ಮೂರು ಮಂದಿ ಹಿರಿಯ ಕೆಎಎಸ್ ಅಧಿಕಾರಿಗಳನ್ನು ಕಡೆಗಣಿಸಿ ಗಾಯತ್ರಿಗೆ ಮುಡಾದ ಪ್ರಭಾರ ಆಯುಕ್ತ ಹುದ್ದೆ ವಹಿಸಿಕೊಡಲಾಗಿತ್ತು. ಅದೂ ಸಾಲದು ಎಂದು ಡಾ ಕೆ ಶಿವರಾಮ ಕಾರಂತ (ಈ ಹೆಸರು ಸೂಚಿಸಿದವರು ಈಗ ಆಲೋಚನೆ ಮಾಡಬೇಕಾಗಿದೆ) ಪಿಲಿಕುಳ ನಿಸರ್ಗಧಾಮದ ಕಾರ್ಯಕಾರಿ ನಿರ್ದೇಶಕ ಹುದ್ದೆಯನ್ನು ಕೂಡ ಜಿಲ್ಲಾಡಳಿತ ಗಾಯತ್ರಿಗೆ ದಯಪಾಲಿಸಿತ್ತು. ಹಿರಿಯರು, ಸಭ್ಯರು, ಅನುಭವಿಯು ಆಗಿದ್ದ ಪ್ರಭಾಕರ ಶರ್ಮಾರಿಂದ ತೆರವಾದ ಹುದ್ದೆಗೆ ಈಕೆ ಸೂಕ್ತ ಅಭ್ಯರ್ಥಿಯೇ ಎಂಬುದನ್ನು ನೇಮಕ ಮಾಡಿದವರು ಈಗಾಗಲೇ ವಿಮರ್ಶೆ ಮಾಡಿಕೊಂಡಿರಬಹುದು.

ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಸುಧೀರ್ ಹೆಗ್ಡೆ ನೇತೃತ್ವದ ಅಧಿಕಾರಿಗಳ ತಂಡ ಖಚಿತ ಮಾಹಿತಿ ಮತ್ತು ದೂರು ದೊರಕಿದ ಕೂಡಲೇ ಎಲ್ಲ ಪರಿಶೀಲನೆ ನಡೆಸಿ ದಾಳಿ ನಡೆಸಿದಾಗ ಗಾಯತ್ರಿ ನಾಯಕ್ 20 ಸಾವಿರ ರೂಪಾಯಿ ಲಂಚ ಪಡೆಯುತ್ತಿರುವುದನ್ನು ಪತ್ತೆ ಮಾಡಿ ಜೈಲಿಗೆ ಕಳುಹಿಸಿದ್ದಾರೆ. ತಾನು ಮಾತ್ರವಲ್ಲದೆ, ಮುಲ್ಕಿ ಹೋಬಳಿಯ ಕಂದಾಯ ನಿರೀಕ್ಷಕ ತುಕ್ರಪ್ಪನಿಗೆ ಕೂಡ ಲಂಚದಲ್ಲಿ ಮತ್ತೊಂದು ಐದು ಸಾವಿರ ರೂಪಾಯಿ ಪಾಲು ದೊರೆತಿದೆ. ಎಸಿಬಿ ಪೆÇಲೀಸರು ಇಬ್ಬರನ್ನು ಬಂಧಿಸಿ ಜೈಲಿಗೆ ಹಾಕಿದ್ದು, 48 ಗಂಟೆಗಳ ಕಾಲ ಜೈಲಿನಲ್ಲಿದ್ದರೆ ಅವರನ್ನು ಸೇವೆಯಿಂದ ವಜಾ ಮಾಡಲು ನಿಯಮದಲ್ಲಿ ಅವಕಾಶ ಇದೆ.

ಕಳೆದ ಹದಿನೈದು ವರ್ಷಗಳಿಂದ ತಲಪಾಡಿ ಮತ್ತು ಸುರತ್ಕಲ್ ಹಾಗೂ ಬಂಟ್ವಾಳ ನಡುವೆ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಅಧಿಕಾರಿಗಳ ಭ್ರಷ್ಟಾಚಾರದಿಂದಾಗಿ ಭೂಸ್ವಾಧೀನ ಕಾರ್ಯ ಮಾತ್ರವಲ್ಲದೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಕೂಡ ಜಿಲ್ಲೆಯಲ್ಲಿ ತುಂಬಾ ವಿಳಂಬವಾಗಿ ನಡೆಯುತ್ತಿದೆ. ಅಧಿಕಾರಿಗಳ ಪಾಲಿಗೆ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಕೆಲಸವು ಲಂಚದ ಹೈವೇಯಾಗಿ ಕಾಣಿಸಿಕೊಂಡಿದೆ.

ಕೆಎಎಸ್ ಅಧಿಕಾರಿ ಎಸಿಬಿ ಪೆÇಲೀಸರ ಬಲೆಗೆ ಬಿದ್ದಿರುವ ಸುದ್ದಿ ಪೇಸ್ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗಳು ಕೇಳಿಬಂದಿವೆ. ಬಂಧಿತರನ್ನು ಜನವರಿ 18ರ ತನಕ ನ್ಯಾಯಾಂಗ ಕಸ್ಟಡಿಗೆ ತೆಗೆದು ಕೊಳ್ಳಲಾಗಿದೆ.

 

ಆರೋಪಿ ಆಸ್ಪತ್ರೆಗೆ

ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದ ವಿಶೇಷ ಭೂ ಸ್ವಾಧೀನಾಧಿಕಾರಿ ಗಾಯತ್ರಿ ಎನ್ ನಾಯಕ್ ಇದೀಗ ಅಸೌಖ್ಯದ ನೆಪವೊಡ್ಡಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನ್ಯಾಯಾಧೀಶರು ಆರೋಪಿ ಗಾಯತ್ರಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ಬಳಿಕ ಪೊಲೀಸರು ಆಕೆಯನ್ನು ಉಪಹಾರಗೃಹಕ್ಕೆ ಕರೆದುಕೊಂಡ ಬಂದಿದ್ದರು. ಅಲ್ಲಿ ಆಕೆಗೆ ಏಕಾಏಕಿಯಾಗಿ ತಲೆ ಸುಸ್ತು ಶುರುವಾಗಿ ಕೂಡಲೇ ಆಸ್ಪತ್ರೆಗೆ ದಾಖಲಿಸುವಂತೆ ಕೋರಿಕೊಂಡರು. ಆಕೆ ಕೋರಿಕೆಯಂತೆ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿ, ವಾರ್ಡಿಗೆ ಸ್ಥಳಾಂತರ ಮಾಡಲಾಗಿದೆ.