ಮಾಧ್ಯಮಗಳು ಕರ್ತವ್ಯ ನಿಭಾಯಿಸಿದ್ದಿದ್ದರೆ ಗೌರಿ ಲಂಕೇಶ್ ಹತ್ಯೆಯಾಗುತ್ತಿರಲಿಲ್ಲ

ಈ ಸಂದರ್ಭದಲ್ಲಿ ಮೂಡುವ ಪ್ರಶ್ನೆ ಎಂದರೆ ಭಾರತದ ಮಾಧ್ಯಮಗಳು ದಿಟ್ಟತನದಿಂದ ಕಾರ್ಯನಿರ್ವಹಿಸಲು ಏಕೆ ಸಾಧ್ಯವಾಗುವುದಿಲ್ಲ ?

  • ಮೋನೋಬಿನ ಗುಪ್ತಾ

ಕರ್ನಾಟಕದ ದಿಟ್ಟ ಸಾಮಾಜಿಕ ಹೋರಾಟಗಾರ್ತಿ `ಗೌರಿ ಲಂಕೇಶ್ ಪತ್ರಿಕೆ’ಯ ಸಂಪಾದಕಿ ಗೌರಿ ಲಂಕೇಶ್ ಅವರ ದಾರುಣ ಹತ್ಯೆಯನ್ನು ಸಾಧಾರಣ ಹಿಂಸಾಕೃತ್ಯ ಎಂದು ಬಣ್ಣಿಸಲಾಗುವುದಿಲ್ಲ. ಅಪರಿಚಿತ ಬಂದೂಕುಧಾರಿಗಳು ಗೌರಿಯ ಹತ್ಯೆ ಮಾಡಿದ್ದಾರೆ ಎಂದು ರಾಜಕಾರಣಿಗಳು ನುಣುಚಿಕೊಳ್ಳಲಾಗುವುದಿಲ್ಲ. ಇಂತಹ ಪ್ರಕರಣಗಳು ಸಾಮಾನ್ಯ ಸಂಗತಿಯಾಗಿರುವ ಸಂದರ್ಭದಲ್ಲಿ ಹೀಗೆ ಹೇಳುವುದೂ ಸಾಧ್ಯವಿಲ್ಲ. ಗೌರಿ ಹತ್ಯೆ  ಭಾರತದ ಪ್ರಭುತ್ವ ತನ್ನ ದಿವ್ಯ ಮೌನದ ಮೂಲಕ ಪ್ರೋತ್ಸಾಹಿಸುವ ದ್ವೇಷ ಸಂಸ್ಕøತಿಯನ್ನು ಪ್ರಶ್ನಿಸುವಂತೆ ಮಾಡಿದೆ.

ಪ್ರತಿರೋಧ, ಮಾಧ್ಯಮ ಸ್ವಾತಂತ್ರ್ಯ ಮತ್ತು ಹರಡುತ್ತಿರುವ ಅಸಹಿಷ್ಣುತೆಗೆ ಸಂಬಂಧಿಸಿದಂತೆ ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ಪ್ರಶ್ನಿಸದೆ ಇರಲಾಗುವುದಿಲ್ಲ. ವಾಸ್ತವವನ್ನು ಮರೆಮಾಚಲೂ ಆಗುವುದಿಲ್ಲ.

ತನಿಖಾ ಸಂಸ್ಥೆಗಳು ನಡೆಸುವ ದೀರ್ಘ ತನಿಖೆ ಸಮಾಧಾನ ತರುವುದಿಲ್ಲ. ಸಾಮಾನ್ಯವಾಗಿ ಅಧಿಕಾರಶಾಹಿ ಪ್ರಕ್ರಿಯೆಯಲ್ಲಿ ಇಂತಹ ಪ್ರಕರಣಗಳು ಧೂಳು ಹಿಡಿದು ಜನಮಾನಸದಿಂದ ಮರೆಯಾಗಿಬಿಡುತ್ತವೆ.

ಎಂ ಎಂ ಕಲಬುರ್ಗಿ, ಪನ್ಸಾರೆ ಮತ್ತು ಧಾಬೋಲ್ಕರ್ ಹತ್ಯೆಯ ಪ್ರಕರಣಗಳಲ್ಲಿ ಈವರೆಗೂ ಯಾವುದೇ ಸುಳಿವು ದೊರೆತಿಲ್ಲ. ಇಂದಿಗೂ ಹಂತಕರ ಶೋಧ ನಡೆಯುತ್ತಲೇ ಇದೆ. ಈ ಹತ್ಯೆಗಳಿಗೂ ಗೌರಿ ಲಂಕೇಶ್ ಹತ್ಯೆಗೂ ಇರುವ ಸೂಕ್ಷ್ಮ ಸಂಬಂಧ ಮತ್ತು ಕೊಂಡಿಯನ್ನು ನಾವು ನಿರ್ಲಕ್ಷಿಸುವಂತಿಲ್ಲ. ಮೂರೂ ಹತ್ಯೆಗಳು ಒಂದೇ ಆಯುಧದಿಂದ ನಡೆದಿದ್ದು ಒಂದೇ ರೀತಿಯಲ್ಲಿ ನಡೆದಿದೆ. ಮುಂಬಯಿಯ ಹೈಕೋರ್ಟ್ ತೀರ್ಪಿನಲ್ಲೂ ಇದನ್ನೇ ಹೇಳಲಾಗಿದೆ.

ಕಳೆದ ಮೂರೂವರೆ ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಹತ್ಯೆಗಳ ಸರಣಿಯನ್ನೇ ಕಾಣಬಹುದು. ಗೋ ರಕ್ಷಣೆ, ರಾಷ್ಟ್ರೀಯವಾದ ಮತ್ತು ಘಾಸಿಗೊಂಡ ಧಾರ್ಮಿಕ ಭಾವನೆಗಳ ನೆಪದಲ್ಲಿ ಹತ್ಯೆಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ಈ ಹಂತಕ ಗುಂಪುಗಳು ಯಾವುದೇ ಕಾನೂನುಗಳನ್ನೂ ಲೆಕ್ಕಿಸದೆ ಪ್ರಜೆಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ. ಆದರೆ ಈ ಹತ್ಯೆ ಮತ್ತು ದ್ವೇಷ ರಾಜಕಾರಣದ ವಿರುದ್ಧ ನಮ್ಮ ಪ್ರತಿರೋಧದ ದನಿ ಕ್ಷೀಣವಾಗಿದೆ. ಹೋರಾಟಗಳು ವಿಘಟಿತವಾಗಿವೆ. ಪ್ರತಿಭಟನೆ ದುರ್ಬಲವಾಗಿದೆ.

ಪತ್ರಿಕೋದ್ಯಮದ ಮೂಲ ಧ್ಯೇಯ ಎಂದರೆ ಪ್ರಬಲ ಶಕ್ತಿ ಕೇಂದ್ರಗಳನ್ನು ಪ್ರಶ್ನಿಸುವುದು, ವಿಮರ್ಶೆಗೊಳಪಡಿಸುವುದು, ದಮನಕಾರಿ ಆಡಳಿತವನ್ನು ಖಂಡಿಸುವುದು ಮತ್ತು ಅಸಹಿಷ್ಣುತೆಯನ್ನು ನಿರಾಕರಿಸುವುದೇ ಆಗಿರುತ್ತದೆ. ಇದು ಪತ್ರಿಕಾ ಮಾಧ್ಯಮದ ಮೂಲ ತತ್ವವೂ ಹೌದು. ಗೌರಿ ಅವರ ಪತ್ರಿಕೋದ್ಯಮದ ವೈಖರಿ ಮತ್ತು ಬರವಣಿಗೆ ಇದನ್ನು ನಿರೂಪಿಸುತ್ತದೆ. ತಮ್ಮ ಕೊನೆಯ ದಿನದವರೆಗೂ ದಿಟ್ಟ ಬರಹಗಳನ್ನು ಪ್ರಕಟಿಸಿದ್ದ ಆಕೆ  ರೋಹಿಂಗ್ಯ ಮುಸ್ಲಿಂ ನಿರಾಶ್ರಿತರಿಗೆ ಅಭಯ ನೀಡಲು ಹಿಂಜರಿಯುತ್ತಿರುವ ನರೇಂದ್ರ ಮೋದಿ ಸರ್ಕಾರದ ವಿರುದ್ಧವೂ ಹರಿತವಾದ ಲೇಖನ ಬರೆದಿದ್ದರು. ಸಲಿಂಗಿಗಳ ವಿಚಾರದಲ್ಲಿ ಮತ್ತು ಗೋರಖಪುರ ದುರಂತದ ಬಗ್ಗೆ ಗೌರಿ ದಿಟ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವರ ಮನೆಯ ಹೊಸ್ತಿಲಲ್ಲೇ ಗೌರಿ ಹತ್ಯೆಯಾಗಿರುವುದು ಹನ್ನೊಂದು ವರ್ಷಗಳ ಹಿಂದೆ ನಡೆದ ಮತ್ತೊಂದು ಹತ್ಯೆಯನ್ನು ನೆನಪಿಸುವಂತಿದೆ.

2006ರ ಅಕ್ಟೋಬರ್ 7ರಂದು ರಷ್ಯಾದ ಪತ್ರಕರ್ತೆ ನೊವಾಯಾ ಗೆಜೆಟಾ ಪತ್ರಿಕೆಯ ಪೊಲಿಟ್ಕೋವಸ್ಕ್ಯಾಳನ್ನು ಅವರ ಮನೆಯ ಬಾಗಿಲಿನಲ್ಲೇ ಗುಂಡಿಟ್ಟು ಕೊಲ್ಲಲಾಗಿತ್ತು. ಈಕೆ ರಷ್ಯಾದ ಅಧ್ಯಕ್ಷ ಪುಟಿನ್ ವಿರುದ್ಧ ಪ್ರಖರವಾದ ಲೇಖನಗಳನ್ನು ಬರೆಯುತ್ತಿದ್ದಳು.

ಜನರು ತಮ್ಮ ಅನಿಸಿಕೆಯನ್ನು ದಿಟ್ಟತನದಿಂದ ವ್ಯಕ್ತಪಡಿಸಿದರೆ ಸಾವು ಎದುರಿಸಬೆಕಾಗುತ್ತದೆ.  ಕೆಲವೊಮ್ಮೆ ಮಾಹಿತಿ ಒದಗಿಸಿದರೂ ಕೊಲೆಯಾಗಬೇಕಾಗುತ್ತದೆ, ಅಪಾಯದಲ್ಲಿರುವುದು ನಾನೊಬ್ಬಳೇ ಅಲ್ಲ ಎಂದು ಹೇಳಿದ್ದ ಈ ದಿಟ್ಟ ಪತ್ರಕರ್ತೆ ಕೆಲ ದಿನಗಳ ನಂತರ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಳು. ಇಂದು ಇದೇ ಧೋರಣೆಯ ಮತ್ತೊಬ್ಬ ಪತ್ರಕರ್ತೆ ಹತ್ಯೆಗೊಳಗಾಗಿದ್ದಳೆ. ಈ ಸಂದರ್ಭದಲ್ಲಿ ಮೂಡುವ ಪ್ರಶ್ನೆ ಎಂದರೆ ಭಾರತದ ಮಾಧ್ಯಮಗಳು ದಿಟ್ಟತನದಿಂದ ಕಾರ್ಯನಿರ್ವಹಿಸಲು ಏಕೆ ಸಾಧ್ಯವಾಗುವುದಿಲ್ಲ.