ಬಲಪಂಥೀಯ ರಾಜಕಾರಣದ ಕಡು ವಿರೋಧಿ ಗೌರಿ ಲಂಕೇಶ್

  • ರೋಹಿತ್ ಬಿ ಆರ್

ಮಂಗಳವಾರ ರಾತ್ರಿ ಎಂಟು ಗಂಟೆ ವೇಳೆ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಸುದ್ದಿ ಬೆಂಗಳೂರು ನಗರವನ್ನು ಮತ್ತು ಅಸಂಖ್ಯಾತ ಸಾಮಾಜಿಕ ಕಾರ್ಯಕರ್ತರನ್ನು, ಕಲಾವಿದರನ್ನು, ಚಿಂತಕರನ್ನು ಆಘಾತಕ್ಕೊಳಪಡಿಸಿತ್ತು. ಹಲವಾರು ಚಿಂತಕರು ದುಃಖದ ಮಡುವಿನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಾಗದೆ ಫೋನುಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದೂ ಉಂಟು. ಕರ್ನಾಟಕ ಕಂಡ ಅತ್ಯಂತ ದಿಟ್ಟ ಮಹಿಳೆ ಮತ್ತು ಪತ್ರಕರ್ತೆಯ ಭೀಕರ ಹತ್ಯೆ ಪ್ರತಿರೋಧದ ದನಿಯನ್ನು ಅಡಗಿಸುವ ತಂತ್ರವಾಗಿದ್ದು, ಈ ಅಘಾತದಿಂದ ಹೊರಬರಲು ಕರ್ನಾಟಕದ ಜನತೆಗೆ ಕೆಲ ಕಾಲ ಬೇಕಾಗಬಹುದು.

ತಮ್ಮ ತಂದೆ ಲಂಕೇಶ್ ಅವರ ವೃತ್ತಿ ಮತ್ತು ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಬಂದಿದ್ದ ಗೌರಿ ಲಂಕೇಶ್ ಹಲವು ವರ್ಷಗಳ ಕಾಲ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಪತ್ರಕರ್ತೆಯಾಗಿದ್ದು, ನಂತರ ಲಂಕೇಶ್ ಪತ್ರಿಕೆಯ ಸಾರಥ್ಯ ವಹಿಸಿಕೊಂಡಿದ್ದರು. ರಾಜ್ಯದಲ್ಲಿ ಬಲವಾಗಿ ಬೇರೂರುತ್ತಿದ್ದ ಬಲಪಂಥೀಯ ರಾಜಕಾರಣದ ಕಟು ವಿಮರ್ಶೆ ಮಾಡುವ ಮೂಲಕ ಗೌರಿ ಜನಜನಿತರಾಗಿದ್ದರು. 1962ರಲ್ಲಿ ಶಿವಮೊಗ್ಗದಲ್ಲಿ ಜನಿಸಿದ ಗೌರಿ ವೈದ್ಯಕೀಯ ವೃತ್ತಿಯಲ್ಲಿ ಆಸಕ್ತಿ ಹೊಂದಿದ್ದರೂ ಪತ್ರಕರ್ತೆಯಾಗಿ ರೂಪುಗೊಂಡಿದ್ದರು.

ಪ್ರಭುತ್ವ ಮತ್ತು ಸ್ಥಾಪಿತ ವ್ಯವಸ್ಥೆಯ ವಿರುದ್ಧ ಸದಾ ತಮ್ಮ ಪ್ರತಿರೋಧ ವ್ಯಕ್ತಪಡಿಸುತ್ತಿದ್ದ ಗೌರಿ ತಮ್ಮ ಪತ್ರಿಕೆ ನಡೆಸಲು ಸರ್ಕಾರಿ ಜಾಹೀರಾತುಗಳನ್ನು ಅವಲಂಬಿಸಲೇ ಇಲ್ಲ. ಅವರ ಬರಹಗಳ ಮೂಲಕ ಹಲವು ಸೈದ್ಧಾಂತಿಕ ಸಂಘರ್ಷಗಳಲ್ಲಿ ತೊಡಗಿಸಿಕೊಂಡಿದ್ದ ಗೌರಿ ಖ್ಯಾತ ನಕ್ಸಲ್ ನಾಯಕ ಸಾಕೇತ್ ರಾಜನ್ ಸಂದರ್ಶನ ನಡೆಸಿದ ಮೊದಲ ಪತ್ರಕರ್ತೆಯಾಗಿದ್ದರು. ಒಂದು ಕಾಲಘಟ್ಟದಲ್ಲಿ ಗೌರಿ ಲಂಕೇಶ್ ಪತ್ರಿಕೆ ಮಾವೋವಾದಿ ಸಿದ್ಧಾಂತಗಳ ಪ್ರತಿಪಾದನೆಗೆ ಭೂಮಿಕೆಯಾಗಿದ್ದೂ ಹೌದು. ಹಿಂದುತ್ವ ಸಂಘಟನೆಗಳ ವಿರುದ್ಧ ತಮ್ಮ ನಿರಂತರ ಯುದ್ಧ ಸಾರಿದ್ದ ಗೌರಿ ಕೋಮು ಸೌಹಾರ್ದ ವೇದಿಕೆಯಲ್ಲಿ ಸಕ್ರಿಯವಾಗಿದ್ದರು.

2016ರಲ್ಲಿ ಎರಡು ಮಾನನಷ್ಟ ಮೊಕದ್ದಮೆಗಳಲ್ಲಿ ಗೌರಿ ಶಿಕ್ಷೆಗೊಳಗಾಗಿದ್ದರು. ಹತ್ತು ಸಾವಿರ ರೂ ದಂಡ ಮತ್ತು ಆರು ತಿಂಗಳ ಸೆರೆವಾಸ ವಿಧಿಸಲಾಗಿತ್ತು. 2008ರಲ್ಲಿ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನವೊಂದರ ವಿರುದ್ಧ ಈ ಮೊಕದ್ದಮೆಯನ್ನು ಹೂಡಲಾಗಿತ್ತು. ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಢುಂಡಿ ಕೃತಿಯ ಲೇಖಕ ಯೋಗೇಶ್ ಮಾಸ್ಟರ್ ಗೌರಿಯವರೊಡನೆ ಭಾಗವಹಿಸಿದ್ದ ಸಮಾರಂಭವೊಂದರಲ್ಲಿ ಯೋಗೇಶ್ ಅವರ ಮುಖಕ್ಕೆ ಮಸಿ ಬಳಿದ ಪ್ರಕರಣ ನಡೆದಿತ್ತು. ದಾವಣಗೆರೆಯಲ್ಲಿ ನಡೆದ ಈ ಘಟನೆಯ ಸಂದರ್ಭದಲ್ಲಿ ಗೌರಿ ಯೋಗೇಶ್ ಅವರಿಗೆ ಬೆನ್ನೆಲುಬಾಗಿ ನಿಂತು ಹೋರಾಡಿದ್ದರು. ಹತ್ಯೆಗೊಳಗಾಗುವ ಕೆಲ ಕಾಲದ ಮುನ್ನ ಗೌರಿ ರೋಹಿಂಗ್ಯ ಮುಸ್ಲಿಮರ ಕುರಿತ ಲೇಖನವೊಂದನ್ನು ವೆಬ್ ತಾಣದಲ್ಲಿ ಪೋಸ್ಟ್ ಮಾಡಿದ್ದರು.