`ಗೌರಿ ಲಂಕೇಶ್’ ಪತ್ರಿಕೆ ಕಚೇರಿಯಲ್ಲಿ ಕಡತಗಳ ಜಾಲಾಡಿದ ತನಿಖಾ ತಂಡ

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಘಟನೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ 21 ಮಂದಿ ಸದಸ್ಯರ ಪೈಕಿ ಮೂರು ಮಂದಿ ಗಾಂಧಿ ಬಜಾರಿನಲ್ಲಿರುವ `ಗೌರಿ ಲಂಕೇಶ್’ ಪತ್ರಿಕೆಯ ಕಚೇರಿಗೆ ತೆರಳಿ ತೀವ್ರ ಶೋಧ ನಡೆಸಿದ್ದಾರೆ.

ಪೂರ್ವ ಆಂಜನೇಯ ರಸ್ತೆಯ ಕಟ್ಟಡವೊಂದರ ಪ್ರಥಮ ಮಹಡಿಯಲ್ಲಿರುವ ಕಚೇರಿಗೆ ಶುಕ್ರವಾರ ಅಪರಾಹ್ನ 3.30ರ ಹೊತ್ತಿಗೆ ಆಗಮಿಸಿದ ತಂಡ ಸುಮಾರು ಐದು ಗಂಟೆಗಳ ಕಾಲ ಅಲ್ಲಿದ್ದ ಎಲ್ಲಾ ಕಡತಗಳು, ಕಪಾಟುಗಳು ಹಾಗೂ ದಾಖಲೆಗಳನ್ನು ತಡಕಾಡಿತು. ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ಅಲ್ಲಿನ ಒಂದು ಸಣ್ಣ ಕೋಣೆಯಲ್ಲಿ ಕೂರಿಸಿ ನಂತರ ಶೋಧ ಕಾರ್ಯ ನಡೆದಿತ್ತು. ಬಾಣಸವಾಡಿ ಎಸಿಪಿ ರವಿಕುಮಾರ್, ಮೈಸೂರು ಡಿಸಿಪಿ ಹರೀಶ್ ಪಾಂಡೆ ಕೂಡ ತನಿಖಾ ತಂಡದಲ್ಲಿದ್ದರು. ಕಚೇರಿಯಿಂದ ಹಲವಾರು ದಾಖಲೆಗಳು, ಕಡತಗಳು ಹಾಗೂ ಪುಸ್ತಕಗಳನ್ನು ತಂಡ ತನ್ನೊಂದಿಗೆ ಒಯ್ದಿದೆ. ಆದರೆ  ಸಿಬ್ಬಂದಿಯನ್ನು ಪ್ರಶ್ನಿಸಲಾಗಿಲ್ಲವೆಂದು ಹೇಳಲಾಗುತ್ತಿದ್ದರೂ ಈಗಾಗಲೇ ಸಂಸ್ಥೆಯ ಸಿಬ್ಬಂದಿಯ ಒಂದು ಸುತ್ತಿನ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಗೌರಿ ಅವರು ತಮ್ಮ ಜೀವಕ್ಕೆ ಬೆದರಿಕೆಯಿದೆಯೆಂದು ತಮ್ಮ ಬಳಿ ಯಾವತ್ತೂ ಹೇಳಿರಲಿಲ್ಲ ಎಂದು ಸಂಸ್ಥೆಯ ಸಿಬ್ಬಂದಿ ತಿಳಿಸಿದ್ದಾರೆ.