ಗ್ಯಾಸ್ಟ್ರಿಕ್ ಎದೆನೋವಿಗೆ ಹೃದಯ ತೂತು ಎಂದು ರೋಗಿಯನ್ನು ಬೆಚ್ಚಿಬೀಳಿಸಿದ ಮುಕ್ಕದ ವೈದ್ಯ

ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಎಡವಟ್ಟು

ನಮ್ಮ ಪ್ರತಿನಿಧಿ ವದಿ
ಮುಲ್ಕಿ : ಗ್ಯಾಸ್ಟ್ರಿಕ್ಕಿನಿಂದ ಬಳಲುತ್ತಿದ್ದ ವ್ಯಕ್ತಿಗೆ ಹೃದಯದಲ್ಲಿ ತೂತು ಬಿದ್ದಿದೆ, ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರೊಬ್ಬರು ರೋಗಿಯ ಬಳಿಯೇ ಹೇಳಿದ ಪರಿಣಾಮ ಆತ ಗಾಬರಿಗೊಂಡು ಕುಸಿದುಬಿದ್ದ ಘಟನೆ ಮುಕ್ಕದ ಆಸ್ಪತ್ರೆಯೊಂದರಲ್ಲಿ ಕಳೆದ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೂಡುಬಿದಿರೆ ನಿವಾಸಿ ಮುಹಮ್ಮದ್ ಎಂಬವರು ಲೈನ್ ಸೇಲ್ ಮಾಡುತ್ತಿದ್ದ ವೇಳೆ ಪಕ್ಷಿಕೆರೆಯ ಸಮೀಪದ ಅಂಗಡಿಯೊಂದರಲ್ಲಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅಂಗಡಿ ಸಮೀಪದಲ್ಲಿದ್ದ ಆಯುರ್ವೇದಿಕ್ ವೈದ್ಯೆ ರಶ್ಮಿಯಲ್ಲಿಗೆ ಹೋಗಿ ತೋರಿಸಿದ್ದರು. ಅವರು ಪರೀಕ್ಷಿಸಿ, “ಗ್ಯಾಸ್ಟ್ರಿಕ್ಕಿನಿಂದ ನೋವು ಕಾಣಿಸಿಕೊಂಡಿದೆ. ಸಂಶಯ ನಿವಾರಣೆಗೆ ಬೇಕಿದ್ದಲ್ಲಿ ಸಮೀಪದ ಆಸ್ಪತ್ರೆಗೆ ತೆರಳಿ ಇಸಿಜಿ ಮಾಡಿಸಿ” ಎಂದು ಸಲಹೆ ನೀಡಿದ್ದರು. ಅದರಂತೆ ಕಿನ್ನಿಗೋಳಿಯ ಕಾನ್ಸೆಟ್ಟಾ ಆಸ್ಪತ್ರೆಗೆ ತೆರಳಿದ ಮುಹಮ್ಮದ್ ಹಾಗೂ ಅಂಗಡಿ ಮಾಲಕ ಇಸ್ಮಾಯಿಲ್ ಅಲ್ಲಿ ಇಸಿಜಿ ಮಾಡಿಸಿದ್ದರು. ಆದರೆ ಅದನ್ನು ಪರಿಶೀಲಿಸಲು ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂದು ಅವರನ್ನು ಮುಕ್ಕದ ಪ್ರತಿಷ್ಠಿತ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಮುಕ್ಕ ಆಸ್ಪತ್ರೆಗೆ ಬಂದೊಡನೆ ಅಲ್ಲಿನ ವೈದ್ಯಾಧಿಕಾರಿಯೊಬ್ಬರು “ಕಾನ್ಸೆಟ್ಟಾದ ಇಸಿಜಿ ವರದಿ ನಮಗೆ ಸರಿಯಾಗುವುದಿಲ್ಲ. ಇಲ್ಲಿ ಬೇರೆಯೇ ಇಸಿಜಿ ಮಾಡಿಸಿ” ಎಂದಾಗ ಆ ಆಸ್ಪತ್ರೆಯಲ್ಲಿ ಮತ್ತೆ ಇಸಿಜಿ ಮಾಡಿಸಲಾಯಿತು. ವರದಿ ನೋಡಿದ ವೈದ್ಯಾಧಿಕಾರಿ, “ಹೃದಯದಲ್ಲಿ ತೂತು ಬಿದ್ದಿದೆ. ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕು. ಸುಮಾರು 3.5 ಲಕ್ಷ ರೂ ಖರ್ಚಾಗಲಿದೆ. ಆರಂಭಿಕವಾಗಿ 2 ಲಕ್ಷ ರೂ ಆಸ್ಪತ್ರೆಗೆ ಕಟ್ಟಿ” ಎಂದು ಎದೆನೋವು ಕಾಣಿಸಿಕೊಂಡು ಕಂಗಾಲಾಗಿದ್ದ ಮುಹಮ್ಮದ್ ಅವರಲ್ಲೇ ನೇರವಾಗಿ ತಿಳಿಸಿದ ಪರಿಣಾಮ ಮುಹಮ್ಮದ್ ಅಲ್ಲೇ ಕುಸಿದುಬಿದ್ದರು.
ಆ ವೇಳೆ ರೋಗಿಯ ಜೊತೆಗಿದ್ದ ಇಸ್ಮಾಯಿಲ್ ವೈದ್ಯರೊಂದಿಗೆ ಡಾ ರಶ್ಮಿ ಹೇಳಿರುವ ಮಾತುಗಳನ್ನು ಹೇಳಿದರಾದರೂ ಆಸ್ಪತ್ರೆಯ ವೈದ್ಯ ಉಢಾಫೆಯಾಗಿ ವರ್ತಿಸಿದ್ದಾರೆಂದು ಇಸ್ಮಾಯಿಲ್ ಆರೋಪಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಬಂದ ರೋಗಿಯ ಮಗ ಕೂಡಲೇ ಅಪ್ಪನನ್ನು ಡಿಸ್ಚಾರ್ಜ್ ಮಾಡಿ ಮಂಗಳೂರಿಗೆ ಕರೆದೊಯ್ಯುವುದಾಗಿ ತಿಳಿಸಿದರೂ ಆಸ್ಪತ್ರೆಯ ವೈದ್ಯಾಧಿಕಾರಿ ಒಪ್ಪಲಿಲ್ಲ. ಬಳಿಕ ಡಿಸ್ಚಾರ್ಜಿಗಾಗಿ ಹಟ ಹಿಡಿದು ರಂಪಾಟ ಮಾಡಬೇಕಾಯಿತು ಎಂದು ಇಸ್ಮಾಯಿಲ್ ತಿಳಿಸಿದ್ದಾರೆ.
ಬಳಿಕ ಮಂಗಳೂರಿನ ಕೆಎಂಸಿಗೆ ಮುಹಮ್ಮದರನ್ನು ಕರೆದೊಯ್ದು ಅಲ್ಲಿ ಮತ್ತೆ ಇಸಿಜಿ ಮಾಡಿಸಿ ಪರೀಕ್ಷಿಸಿದ ಹೃದಯತಜ್ಞರು, “ಯಾವುದೇ ತೊಂದರೆಗಳಿಲ್ಲ. ಗ್ಯಾಸ್ಟ್ರಿಕ್ಕಿನಿಂದ ಎದೆನೋವು ಕಾಣಿಸಿಕೊಂಡಿದೆ” ಎಂದು ತಿಳಿಸಿ ಔಷಧ ನೀಡಿ ಮನೆಗೆ ಕಳುಹಿಸಿದ್ದಾರೆ ಎಂದು ಮುಹಮ್ಮದ್ ಮಾಹಿತಿ ನೀಡಿದ್ದಾರೆ.

ಮೆಡಿಕಲ್ ಕಾಲೇಜಿಗೆ
ಪರವಾನಿಗೆಯೇ ಇಲ್ಲ ?
ಮುಕ್ಕದಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಆಸ್ಪತ್ರೆಗೆ ಕೇವಲ ದಂತ ವೈದ್ಯಕೀಯ ಕಾಲೇಜಿಗೆ ಮಾತ್ರ ಪರವಾನಿಗೆ ಇದೆ. ಇಲ್ಲಿ ಮಂಗಳೂರಿನ ವಲಚ್ಚಿಲ್ ಅಲ್ಲಿರುವ ಕಾಲೇಜಿನ ಪರವಾನಿಗೆಯನ್ನೇ ಬಳಸಿಕೊಂಡು ದಂತ ಚಿಕಿತ್ಸೆ ಸಹಿತ ಎಲ್ಲಾ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿವೆ.
ಈ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ 9 ತಿಂಗಳವರೆಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಹೆರಿಗೆಯ ವೇಳೆ ಆಸ್ಪತ್ರೆಗೆ ಬಂದರೆ ವೈದ್ಯರಿಲ್ಲ ಎಂದು ಹಿಂದೆ ಕಳುಹಿಸಲಾಗುತ್ತಿದೆ ಎಂದು ಕೆಲತಿಂಗಳ ಹಿಂದೆ ಗರ್ಭಿಣಿ ಸ್ತ್ರೀಯೊಬ್ಬರ ಕುಟುಂಬಸ್ಥರು ಹಾಗೂ ಸ್ಥಳೀಯರು ಸೇರಿಕೊಂಡು ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.