ಶೀಘ್ರವೇ ಪೈಪ್ ಲೈನ್ ಮೂಲಕ ಬೆಂಗಳೂರಿಗೆ ಎಲ್ಪಿಜಿ ಸಾಗಾಟ ; ಹೆದ್ದಾರಿಯಲ್ಲಿ ಕಣ್ಮರೆಯಾಗಲಿವೆ ಬುಲೆಟ್ ಟ್ಯಾಂಕರುಗಳು

 

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ಮಂಗಳೂರು-ಬೆಂಗಳೂರು-ಮೈಸೂರು ಎಲ್ ಪಿ ಜಿ ಪೈಪ್ ಲೈನ್ ಸಾಗಿಸುವ ಕೊಳವೆ ಮಾರ್ಗದ ಸಮೀಕ್ಷೆ ಅಕ್ಟೋಬರ್ ತಿಂಗಳಿನಲ್ಲಿ ನಡೆದ ಬಳಿಕ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇನ್ಮೇಲೆ ಅನಿಲ ಸಾಗಾಟದ ಬುಲೆಟ್ ಟ್ಯಾಂಕರುಗಳು ಕಣ್ಮರೆಯಾದಾವು ಎಂದು ಎಲ್ಲರೂ ಊಹಿಸಿದ್ದರು. ಆದರೆ ಈ ರಸ್ತೆಯ ಅನಿಲ ಸಾಗಾಟದ ಕೊಳವೆ ಮಾರ್ಗದ ಸಮೀಕ್ಷೆಯ ಬಳಿಕವೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರು ಟ್ಯಾಂಕರುಗಳು ಮಗುಚಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದವು. ಆದರೆ ಪೈಪ್ ಲೈನ್ ಮೂಲಕ ಅನಿಲ ಸಾಗಾಟ ಆರಂಭಗೊಂಡಲ್ಲಿ ಬುಲೆಟ್ ಟ್ಯಾಂಕರುಗಳು ಕಣ್ಮರೆಯಾಗಲಿವೆ.
ಬಿ ಸಿ ರೋಡು, ಗುಂಡ್ಯ ಮತ್ತು ನೀರಕಟ್ಟೆಯಲ್ಲಿ ಟ್ಯಾಂಕರುಗಳು ಮಗುಚಿ ಆತಂಕ ಸೃಷ್ಟಿಸಿದವು. ಅದೃಷ್ಟವಶಾತ್ ಯಾವುದೇ ಸ್ಫೋಟ ಸಂಭವಿಸದೇ ಪ್ರಾಣಹಾನಿ ಉಂಟಾಗಿಲ್ಲ. ಮೂರು ಟ್ಯಾಂಕರುಗಳಲ್ಲಿ ಎರಡರಲ್ಲಿ ಅನಿಲವಿದ್ದು ಸೋರಿಕೆಯಾದರೂ ಕೂಡಲೇ ಕಾರ್ಯಾಚರಣೆ ನಡೆಸುವ ಮೂಲಕ ಅನಿಲದ ವರ್ಗಾವಣೆ ಮಾಡಲಾಯಿತು. ಅಲ್ಲದೆ ಪೊಲೀಸರು ಸುಮಾರು 10 ಗಂಟೆಗಳ ಕಾಲ ಪರ್ಯಾಯ ಸಂಚಾರ ವ್ಯವಸ್ಥೆ ಮಾಡುವ ಮೂಲಕ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಂಡಿದ್ದರು. ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವ ಮೂಲಕ ಸಾರ್ವಜನಿಕರಿಗೂ ಕೂಡಾ ಜಾಗೃತಿ ಮೂಡಿಸಿ ಸುರಕ್ಷತೆ ಕಲ್ಪಿಸಲಾಗಿತ್ತು.
ಬೆಂಗಳೂರು ಭಾಗದ ಯಡಿಯೂರು ಮತ್ತು ಇತ್ತ ಮೈಸೂರಿನ ಕಡೆಗೆ ಸುಮಾರು 355.52 ಕಿ ಮೀ ಉದ್ದದ ಪೈಪ್ ಲೈನ್ ಕಾಮಗಾರಿಗೆ ಈಗಾಗಲೇ ಸರ್ವೇ ಪೂರ್ಣಗೊಂಡಿದೆ. ಇಲ್ಲಿನ ಪೈಪ್ ಲೈನ್ ಮೂಲಕ ಪೂರ್ಣಪ್ರಮಾಣದ ಸಾಗಾಟ ಇನ್ನಷ್ಟೇ ನಡೆಯಬೇಕಾಗಿದೆ ಎಂದು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿ ಅಧಿಕಾರಿಗಳು ಹೇಳಿದ್ದಾರೆ.
ಪೈಪ್ ಲೈನ್ ಮೂಲಕ ಎಲ್ ಪಿ ಜಿ ಸಾಗಾಟ ಆರಂಭಗೊಂಡ ಬಳಿಕ ಈ ಮಾರ್ಗವಾಗಿ ಸಾಗುವ ಟ್ಯಾಂಕರ್ ಮಾಲಕರು ಗುತ್ತಿಗೆಯನ್ನು ಕಳೆದುಕೊಳ್ಳಲಿದ್ದಾರೆ. ಮೈಸೂರು ಮಾರ್ಗವಾಗಿ ಸಾಗುವ ಎಲ್ಲಾ ಟ್ಯಾಂಕರುಗಳು ಸ್ಥಗಿತಗೊಳ್ಳಲಿವೆ ಎಂದು ಎಚ್ ಪಿ ಸಿ ಎಲ್ ಹಿರಿಯ ಅಧಿಕಾರಿ ಹೇಳಿದ್ದಾರೆ.
ಬೆಂಗಳೂರು-ಮೈಸೂರು ಮಾರ್ಗವಾಗಿ ಸಂಚರಿಸುತ್ತಿದ್ದ 175 ಟ್ಯಾಂಕರುಗಳಲ್ಲಿ ಕೇವಲ 100ರಷ್ಟು ಟ್ಯಾಂಕರುಗಳು ಮಾತ್ರ ಸಂಚರಿಸಲಿವೆ. ಇವಿಷ್ಟು ಅಲ್ಲದೆ ಸುಮಾರು 80 ಟ್ಯಾಂಕರುಗಳು ಕಾರವಾರ, ಗೋವಾ, ಕೇರಳ ಮತ್ತು ತಮಿಳುನಾಡುಗಳಿಗೆ ಎಲ್ ಪಿ ಜಿ ಸಾಗಾಟಕ್ಕೆ ಬಳಕೆಯಾಗಲಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ವರ್ಷ ಜನವರಿಯಿಂದ ಡಿಸೆಂಬರ್ 2ನೇ ವಾರದವರೆಗೆ ಒಟ್ಟು 33 ಅಪಘಾತ ಪ್ರಕರಣಗಳು ನಡೆದಿದ್ದರೂ ಕೇವಲ 3 ಬುಲೆಟ್ ಟ್ಯಾಂಕರುಗಳು ಪಲ್ಟಿಯಾಗಿವೆ.