50 ಅಡಿ ಆಳದ ಕಮರಿಗೆ ಉರುಳಿದ ಗ್ಯಾಸ್ ಟ್ಯಾಂಕರ್

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೀರಕಟ್ಟೆ ಎಂಬಲ್ಲಿ ಮಂಗಳವಾರ ಮುಂಜಾನೆ ಅನಿಲ ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಆಳದ ತೋಡಿಗೆ ಮಗುಚಿ ಬಿದ್ದ ಘಟನೆ ನಡೆದಿದೆ.

ಅಪಘಾತ ನಡೆದ ಸಂದರ್ಭದಲ್ಲಿ ಟ್ಯಾಂಕರಿನಲ್ಲಿ ಅನಿಲ ಸೋರಿಕೆ ಉಂಟಾಗಿ ಪರಿಸರದಲ್ಲಿ ಭಯದ ವಾತಾವರಣ ಉಂಟಾಗಿತ್ತು. ಬಳಿಕ ತಜ್ಞರ ತಂಡ ಕೂಡಲೇ ಸ್ಥಳಕ್ಕಾಗಮಿಸಿ ಅನಿಲ ಸೋರಿಕೆಯನ್ನು ತಡೆಗಟ್ಟಿ, ಅನಿಲವನ್ನು ಬದಲಿ ಟ್ಯಾಂಕರಿಗೆ ವರ್ಗಾವಣೆ ಕಾರ್ಯವನ್ನು ಕೈಗೊಂಡರು.

ಭಾರತ್ ಪೆಟ್ರೋಲಿಯಂ ಕಂಪೆನಿಗೆ ಸೇರಿದ ಗ್ಯಾಸ್ ಟ್ಯಾಂಕರ್ ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಚಾಲಕ ತಮಿಳುನಾಡು ನಿವಾಸಿ ಮರಿಯಪ್ಪನ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಅಪಘಾತದ ಬಳಿಕ ಅನಿಲ ಟ್ಯಾಂಕರಿನ ವಾಲ್ವ್ ಓಪನ್ ಆಗಿದ್ದು, ಅನಿಲ ಸೋರಿಕೆ ಉಂಟಾಗುತ್ತಿತ್ತು.  ಕೂಡಲೇ ನೆಲ್ಯಾಡಿಯಿಂದ ಬಂದ ತೈಲ ಕಂಪೆನಿ ಅಧಿಕಾರಿಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಪುತ್ತೂರು, ಬಂಟ್ವಾಳ, ಮಂಗಳೂರು ಕಡೆಗಳಿಂದ ಐದು ಅಗ್ನಿ ಶಾಮಕ ದಳದ ವಾಹನಗಳನ್ನು ತರಿಸಲಾಗಿತ್ತು. ಅಗ್ನಿ ಶಾಮಕದಳದ ಮುಖ್ಯ ಅಧಿಕಾರಿ ಶಿವಶಂಕರ್ ಮತ್ತು ಪ್ರಾದೇಶಿಕ ಅಧಿಕಾರಿ ತಿಪ್ಪೇಸ್ವಾಮಿ ಅವರು ಘಟನಾ ಸ್ಥಳದಲ್ಲಿದ್ದು ನಿರ್ದೇಶನ ನೀಡಿದರು.

ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಹಾಗೂ ಪರಿಸರದಲ್ಲಿ ವಿದ್ಯುತ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಟ್ಯಾಂಕರ್ ಉರುಳಿ ಬಿದ್ದ ಸ್ಥಳಕ್ಕೆ ಯಾರೂ ತೆರಳದಂತೆ ಹಾಗೂ ಮೊಬೈಲ್ ಫೋನ್ ಉಪಯೋಗಿಸದಂತೆ ಎಚ್ಚರಿಕೆಯನ್ನು ನೀಡಲಾಗಿತ್ತು. ಪೂರ್ವಾಹ್ನ 11.30ರ ಬಳಿ ಟ್ಯಾಂಕರ್‍ನಲ್ಲಿದ್ದ ಅನಿಲವನ್ನು ಇತರ 4 ಟ್ಯಾಂಕರುಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆಸಲಾಯಿತು.

ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ಸರಿಸುಮಾರು 10 ಗಂಟೆಗಳಿಗೂ ಅಧಿಕ ಕಾಲ ಸ್ಥಗಿತಗೊಳಿಸಲಾಗಿತ್ತು. ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ಎಲ್ಲಾ ವಾಹನಗಳನ್ನು  ಪ್ರತ್ಯೇಕ ದಾರಿ ಮೂಲಕ ಕಳುಹಿಸಲಾಯಿತು.

ಸಂಜೆ ಸುಮಾರು 8 ಗಂಟೆಯ ವೇಳೆಗೆ ಟ್ಯಾಂಕರಿನಿಂದ ಅನಿಲವನ್ನು ಸಂಪೂರ್ಣ ಖಾಲಿ ಮಾಡಿದ ಬಳಿಕ ಹೆದ್ದಾರಿ 75ರಲ್ಲಿ ವಾಹನ ಸಂಚಾರ ಆರಂಭಗೊಂಡಿತು. ಬುಧವಾರದಂದು ಟ್ಯಾಂಕರನ್ನು ಮೇಲಕ್ಕೆತ್ತಲಾಗುವುದು ಎಂದು ಎಸ್ಪಿ ಗುಲಾಬ್ ರಾವ್ ಬೊರಸೆ ಹೇಳಿದ್ದಾರೆ.