ಟ್ಯಾಂಕರ್ ಮಗುಚಿ ಗ್ಯಾಸ್ ಸೋರಿಕೆ

ಶಿರಾಡಿ ಘಾಟ್ ರಸ್ತೆ ಗಂಟೆಗಟ್ಟಲೆ ಬಂದ್

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಇಲ್ಲಿಗೆ ಸಮೀಪದ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ರಾ ಹೆ 75ರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಅನಿಲ ಟ್ಯಾಂಕರೊಂದು ಮಗುಚಿ ಭಾರೀ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯುಂಟಾಗಿ ಭೀತಿ ಮೂಡಿದೆ. ತಕ್ಷಣದಿಂದಲೇ ಶಿರಾಡಿ ಘಾಟ್ ರಸ್ತೆಯನ್ನು ಗಂಟೆಗಟ್ಟಲೇ ಬಂದ್ ಮಾಡಲಾಯಿತು.

ಮಂಗಳೂರಿನಿಂದ ಬೆಂಗಳೂರಿಗೆ ಅಡುಗೆ ಅನಿಲ ಸಾಗಾಟ ಮಾಡುತ್ತಿದ್ದ ಇಂಡೇನ್ ಕಂಪೆನಿಗೆ ಸೇರಿದ ಟ್ಯಾಂಕರ್ ಇದಾಗಿದ್ದು, ಬುಧವಾರ ಕೊಡ್ಯಕಲ್ಲು ಎಂಬಲ್ಲಿನ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಒಂದು ಬದಿಗೆ ಮಗುಚಿ ಗ್ಯಾಸ್ ಸೋರಿಕೆಯುಂಟಾಗಿ, ಪರಿಸರವಿಡೀ ಅನಿಲದ ವಾಸನೆ ಪಸರಿಸಿತು.

ಘಟನೆಯ ಬಗ್ಗೆ ಮಾಹಿತಿ ತಿಳಿದಾಕ್ಷಣವೇ ಉಪ್ಪಿನಂಗಡಿ ಪೊಲೀಸರು ಹಾಗೂ ನೆಲ್ಯಾಡಿ ಹೊರಠಾಣೆ ಪೊಲೀಸರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿ ಸಂಭವನಿಯ ಅಪಾಯವನ್ನು ನಿಯಂತ್ರಿಸಿದರು. ಮಾತ್ರವಲ್ಲದೆ ಪರಿಸರದೆಲ್ಲೆಡೆ ವಿದ್ಯುತ್ ಸರಬರಾಜು ತಡೆಗಟ್ಟಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಯಿತು. ಹರಿದು ಹೋದ ಅಡುಗೆ ಅನಿಲ ಗಾಳಿಯಲ್ಲಿ ಲೀನವಾಗುವ ಮುನ್ನ ಪರಿಸರದ ಹೊಳೆ, ತೋಡಿಗೆ ಸೇರಿಕೊಂಡು ನೀರಿನೊಂದಿಗೆ ವಿಸ್ತರಿಸುವ ಭೀತಿಯೂ ಮೂಡಿತ್ತು.

ಪ್ರಾರಂಭದಲ್ಲಿ ಪುತ್ತೂರಿನಿಂದ ಎರಡು ಅಗ್ನಿಶಾಮಕ ವಾಹನಗಳನ್ನು ಕರೆಸಿ, ಅನಿಲ ಸೋರಿಕೆಯಾಗುತ್ತಿರುವಲ್ಲಿ ನೀರು ಹರಿಸಿ, ಪರಿಸರದಲ್ಲಿ ಗ್ಯಾಸ್ ಪಸರಿಸದಂತೆ ತಡೆಯಲಾಯಿತ್ತಾದರೂ ಹರಿದು ಹೋದ ಅಡುಗೆ ಅನಿಲದ ಮೂಲಕ ಯಾವುದೇ ಸಂದರ್ಭದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇರುವುದನ್ನು ಮನಗಂಡ ಪೆÇಲೀಸರು ಜಿಲ್ಲೆಯ ನಾನಾ ಕಡೆಗಳಿಂದ

ಅಗ್ನಿಶಾಮಕ ದಳಗಳನ್ನು ಕರೆಯಿಸಿ ಟ್ಯಾಂಕರ್ ಮೇಲೆ ಸತತ ನೀರು ಹಾಯಿಸುವ ಕಾರ್ಯಾಚರಣೆಗೆ ಮುಂದಾದರು. ರಾತ್ರಿ ವೇಳೆ ಮಂಗಳೂರಿನಿಂದ ಇಂಡೇನ್ ಕಂಪೆನಿಯ ತಜ್ಞರ ತಂಡ ಆಗಮಿಸಿದ್ದು, ಅನಿಲ ಸೋರಿಕೆಯನ್ನು ತಡೆಗಟ್ಟಲು ಅಸಾಧ್ಯವಾದರೆ ಟ್ಯಾಂಕರಿನಲ್ಲಿರುವ  ಸಂಪೂರ್ಣ ಅನಿಲವನ್ನು ಹೊರಗಡೆ ಬಿಡುವ ಮೂಲಕ ಪರಿಹಾರ ಕಂಡುಕೊಳ್ಳುವ ನಿರೀಕ್ಷೆ ಇದೆ.

ಟ್ಯಾಂಕರಿನಿಂದ ಅನಿಲ ಹೊರ ಬಿಡುವುದೇ ಅನಿವಾರ್ಯವೆನಿಸಿದ್ದು, ಈ ಕೆಲಸ ಗುರುವಾರ ಬೆಳಗ್ಗಿನ ತನಕ ನಡೆಯುವ ಸಾಧ್ಯತೆಯಿದೆ. ಘಟನೆಯಿಂದ ಟ್ಯಾಂಕರ್ ಚಾಲಕ ತಮಿಳುನಾಡು ಮೂಲದ ವೀರಮಣಿ (52) ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಘಟನೆ ನಡೆದ ಸ್ಥಳವು ದಟ್ಟಾರಣ್ಯವನ್ನಾವರಿಸಿದ ಸ್ಥಳವಾಗಿದ್ದು, ಮನೆಗಳು ವಿರಳವಾಗಿದ್ದರೂ ಗಾಳಿಯಲ್ಲಿ ಅನಿಲದ ಪ್ರಮಾಣ ಹೆಚ್ಚಿದ್ದಾಗ ಬೆಂಕಿ ಸ್ಪರ್ಶಗೊಳ್ಳುವ ಸಾಧ್ಯತೆಯನ್ನು ಮನಗಂಡ ಉಪ್ಪಿನಂಗಡಿ ಪೆÇಲೀಸರು 1 ಕಿ ಮೀ ವ್ಯಾಪ್ತಿಯಲ್ಲಿನ ಎಲ್ಲಾ ಮನೆಗಳಿಗೂ ಸಂಪರ್ಕ ಸಾಧಿಸಿ ಒಲೆ ಉರಿಸದಂತೆ ವಿನಂತಿಸಿಕೊಂಡಿದ್ದಾರೆ. ಎಲ್ಲಾ ವಾಹನಗಳನ್ನು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಲಾಗಿ ಪರಿಹಾರ ಕಾರ್ಯಾಚರಣೆಗೆ ಯಾವುದೇ ಅಡಚಣೆ ಮೂಡದಂತೆ ಎಚ್ಚರಿಕೆ ವಹಿಸಲಾಗಿದೆ. ಒಟ್ಟು ನಾಲ್ಕು ಅಗ್ನಿ ಶಾಮಕ ವಾಹನಗಳು ಸತತ ನೀರು ಹರಿಸುವ ಮೂಲಕ ಹೊರ ಬರುವ ಅನಿಲದ ದುರ್ಬಲತೆಗೆ ಶ್ರಮಿಸುತ್ತಿದ್ದಾರೆ.

ಅನಿಲ ಸೋರಿಕೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ಬದಲಾಯಿಸಲಾಗಿದ್ದು, ಗುರುವಾರ ಬೆಳಗ್ಗಿನ ತನಕ ಬೆಂಗಳೂರಿಗೆ ಹೋಗುವ ವಾಹನಗಳನ್ನು ಬಂಟ್ವಾಳದ ಮೂಲಕ ತಡೆದು ಚಾರ್ಮಾಡಿಯಾಗಿ, ಮಾಣಿಯಲ್ಲಿ ತಡೆದು ಮಡಿಕೇರಿಯಾಗಿ, ಉಪ್ಪಿನಂಗಡಿಯ ಹಳೆಗೇಟು ಬಳಿ ತಡೆದು ಕಡಬ-ಬಿಳಿನೆಲೆ ಕೈಕಂಬ ಮಾರ್ಗವಾಗಿ ಗುಂಡ್ಯದ ಮೂಲಕ ಕಳುಹಿಸಲಾಗುತ್ತಿದೆ. ಧರ್ಮಸ್ಥಳದಿಂದ ಬರುವ ವಾಹನಗಳನ್ನು ಪೆರಿಯಶಾಂತಿಯ ಬಳಿ ತಡೆದು ಬದಲಿ ಮಾರ್ಗವಾದ ಮರ್ಧಾಳ, ಬಿಳಿನೆಲೆ ಕೈಕಂಬದ ಮೂಲಕವಾಗಿ ಗುಂಡ್ಯಕ್ಕೆ ಕಳುಹಿಸಲಾಗುತ್ತಿದೆ.

ಕೆಲ ವರ್ಷಗಳ ಹಿಂದೆ ಪೆರ್ನೆಯಲ್ಲಿಯೂ ಇದೇ ರೀತಿ ಟ್ಯಾಂಕರ್ ಅಪಘಾತಕ್ಕೀಡಾಗಿ ಅಗ್ನಿ ಅನಾಹುತ ಸಂಭವಿಸಿ 13 ಮಂದಿಯ ದಾರುಣ ಸಾವಿಗೆ ಕಾರಣವಾದ ದುರ್ಘಟನೆ ಜನ ಮಾನಸದಲ್ಲಿ ಇನ್ನೂ ಅಚ್ಚಳಿಯದೇ ಉಳಿದಿರುವಂತೆಯೇ ಮತ್ತೆ ಶಿರಾಡಿ ಗ್ರಾಮದ ಕೊಡ್ಯ ಕಲ್ಲು ಎಂ¨ಲ್ಲಿ ಟ್ಯಾಂಕರ್ ಅನಾಹುತ ಸಂಭವಿಸಿ ಭಾರೀ ಪ್ರಮಾಣದ ಅನಿಲ ಸೋರಿಕೆಯುಂಟಾದರೂ ಸಮೀಪದಲ್ಲೆಡೆ ಜನ ವಸತಿ ಇಲ್ಲದ ಕಾರಣ ಸಂಭವನೀಯ ಅಪಾಯ ತಪ್ಪಿದೆ.

LEAVE A REPLY