ಹಾಸನದಲ್ಲಿ ಗ್ಯಾಸ್ ಲೀಕ್, ಹಲವು ಮಂದಿ ಆಸ್ಪತ್ರೆಗೆ

ಹಾಸನ : ಲೂರು ಪುರ  ಸಭಾ ವ್ಯಾಪ್ತಿಯಲ್ಲಿ ನಸುಕಿನ ಜಾವ ನೀರಿನ ಸಂಸ್ಕರಣಾ ಘಟಕದಲ್ಲಿ ವಿಷಯುಕ್ತ ಕ್ಲೋರಿನ್ ಅನಿಲ ಬಿಡುಗಡೆಗೊಂಡ ಕಾರಣ ಹಲವು ಮಂದಿ ಅಸ್ವಸ್ಥಗೊಂಡು ಆತಂಕ ಸೃಷ್ಟಿಯಾಗಿತ್ತು. ಪುರಸಭೆಯ ನಾಲ್ವರು ಸಿಬ್ಬಂದಿ ಸೇರಿದಂತೆ ಒಟ್ಟು 25 ಮಂದಿ ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ಯಾಸ್ ಸೋರಿಕೆಯಿಂದಾಗಿ ಸಾರಾಪುರ ಪರಿಸರದ ಜನರಲ್ಲಿ ಉಸಿರಾಟದ ತೊಂದರೆ, ಗಂಟಲಿನಲ್ಲಿ ಕೆರೆತ ಶುರುವಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನೀರು ಸರಬರಾಜು ಮಾಡುವ ಲೋಕೇಶ್, ಶಂಕರ್ ಮತ್ತು ಕರಿಯಪ್ಪ ಎಂಬವರು ಪ್ಲ್ಯಾಂಟಿನಲ್ಲಿ ಗ್ಯಾಸ್ ಲೀಕ್ ಆಗುವುದನ್ನು ಮುಂಜಾನೆ 2 ಗಂಟೆಗೆ ಗಮನಿಸಿದ್ದಾರೆ. ಅವರು ಕೂಡಲೇ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಿದ್ದಾರೆ. ಆದರೆ ಸಾಧ್ಯವಾಗದೇ ಇದ್ದಾಗ ಕಿರಿಯ ಇಂಜಿನಿಯರಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಅವರು ತಂಡದೊಂದಿಗೆ ಆಗಮಿಸಿ ಗ್ಯಾಸ್‍ಲೀಕೇಜ್ ನಿಲ್ಲಿಸಲು ಪ್ರಯತ್ನಿಸುತ್ತಿದ್ದಂತೆ ಅಸ್ವಸ್ಥರಾಗಿದ್ದಾರೆ. ಕೂಡಲೇ ಆಂಬುಲೆನ್ಸ್‍ಗೆ ಕರೆ ಮಾಡಿ ಅವರನ್ನು ಬೇಲೂರು ಆಸ್ಪತ್ರೆಗೆ ದಾಖಲಿಸಲಾಯಿತು.

ಕ್ಷಣಮಾತ್ರದಲ್ಲಿ ಹಿರಿಯ ಅಧಿಕಾರಿಗಳ ತಂಡ ಅಗ್ನಿಶಾಮಕ ಸಿಬ್ಬಂದಿಗಳ ಸಹಿತ ಹಾಜರಾಗಿ ಗ್ಯಾಸ್ ಲೀಕೇಜ್ ಸರಿಪಡಿಸಿದ್ದಾರೆ. ಸಾರ್ವಜನಿಕರಿಗೆ ಮನೆಯಿಂದ ಹೊರಬಾರದಂತೆ ಮುನ್ನೆಚ್ಚರಿಕೆ ನೀಡಲಾಯಿತು. ಈ ನಡುವೆ ಹಲವು ಮಂದಿ ಅಸ್ವಸ್ಥರಾಗಿದ್ದು ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು.

500 ಮೀಟರ್ ವ್ಯಾಪ್ತಿಯೊಳಗೆ ಇರುವ ಸಾರ್ವಜನಿಕರನ್ನು ಮನೆ ಬಿಟ್ಟು ತೆರಳುವಂತೆ ಸೂಚಿಸಲಾಯಿತು. ಸುಮಾರು 5 ಗಂಟೆಯ ಹೊತ್ತಿಗೆ ಗ್ಯಾಸ್ ಲೀಕೇಜ್ ಆಗುವುದನ್ನು ತಡೆಗಟ್ಟಲಾಯಿತು. ಸಿಲಿಂಡರಗೆ ಅಳವಡಿಸಲಾಗಿದ್ದ ವಾಶರ್ ಸಡಿಲಗೊಂಡು ಅಲ್ಲಿ ಗ್ಯಾಸ್ ಲೀಕ್ ಆಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಉಂಟಾಗಿಲ್ಲ. ಸತತ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಲಾಗಿತ್ತು.