ಗರಡಿ ಸಮಸ್ಯೆ ಶೀಘ್ರದಲ್ಲೇ ಇತ್ಯರ್ಥ : ಕಾಗೋಡು

ಕಾಗೋಡು ತಿಮ್ಮಪ್ಪ

ನಮ್ಮ ಪ್ರತಿನಿಧಿ ವರದಿ

ಉಡುಪಿ : “ಮೂರು ತಿಂಗಳೊಳಗೆ ಭೂ ಹಕ್ಕನ್ನು ಕಾನೂನುಬದ್ಧಗೊಳಿಸುವ ಮೂಲಕ ಜಿಲ್ಲೆಯ ಗರಡಿಗಳಿಗೆ ಸಂಬಂಧಿಸಿದ ಕಂದಾಯ ಸಮಸ್ಯೆಗಳನ್ನು ಶೀಘ್ರದಲ್ಲೇ ಇತ್ಯರ್ಥಪಡಿಸಲಾಗುವುದು” ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ಅವರು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಸಂಘಟಿಸಿದ ಉಡುಪಿ ಜಿಲ್ಲಾಮಟ್ಟದ ಗರಡಿ ಗುರಿಕಾರರ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. “ಗರಡಿಗೆ ಸಂಬಂಧಿಸಿ ಸರ್ವೆ ನಂಬರನ್ನು ಗಳಿಸಿದ ಬಳಿಕ ವಿಧಿ-ವಿಧಾನಗಳನ್ನು ತಹಶೀಲ್ದಾರರ ಮೂಲಕ ಒದಗಿಸಲಾಗುವುದು. ಗರಡಿಗಳ ದುರಸ್ತಿ ಮತ್ತು ಅಭಿವೃದ್ದಿ ಕೆಲಸಕ್ಕೆ ಬೇಕಾದ ನಿಧಿಯನ್ನು ಮುಜರಾಯಿ ಇಲಾಖೆ ಮೂಲಕ ಬಿಡುಗಡೆಗೊಳಿಸಲಾಗುವುದು” ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಬಿ ಕೆ ಹರಿಪ್ರಸಾದ್ ಸಮ್ಮೇಳನ ಉದ್ಘಾಟಿಸಿ, “ಅಧಿಕಾರಿಗಳ ಸಭೆಯನ್ನು ನಡೆಸಿದ ಬಳಿಕ ಗರಡಿಗಳ ಪುನರುಜ್ಜೀವನ ಮತ್ತು ಹೊಸ ಗರಡಿ ನಿರ್ಮಾಣಕ್ಕೆ ಅನುದಾನಗಳನ್ನು ಒದಗಿಸಲಾಗುವುದು. ಗರಡಿಯ ಗುರಿಕಾರರಿಗೆ ದೇವಸ್ಥಾನದ ಅರ್ಚಕರಂತೆ ಸಂಭಾವನೆಗಳನ್ನು ನೀಡಲಾಗುವುದು. ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವೆ ತಾರತಮ್ಯ ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಕಂಡುಬಂದಿದೆ. ಶಿಕ್ಷಣವೊಂದೇ ಜಾತಿ ತಾರತಮ್ಯ ನಿರ್ಮೂಲನೆಗೆ ಮಾರ್ಗ” ಎಂದರು.