ತಲಪಾಡಿ ಕೆ ಸಿ ರೋಡು ಹೆದ್ದಾರಿ ಪಕ್ಕ ತ್ಯಾಜ್ಯ ರಾಶಿ !

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಾಜಿ ಆರೋಗ್ಯ ಸಚಿವ ಮತ್ತು ಪ್ರಸ್ತುತ ಆಹಾರ ಖಾತೆ ಸಚಿವ ಯು ಟಿ ಖಾದರ್ ಅವರ ಕ್ಷೇತ್ರ ಇದೀಗ ಕೊಳಚೆ ಗುಂಡಿ ಆಗುತ್ತಿದೆಯೇ ಎಂದು ಯಾರಾದರೂ ಕೇಳಿದರೆ ಹೌದು ಎನ್ನುವ ಉತ್ತರ ಸಿಗುತ್ತದೆ.

ತಲಪಾಡಿ ತೊಕ್ಕೊಟ್ಟು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರ ಉದ್ದಕ್ಕೂ ಬಹುತೇಕ ಕಡೆ ತ್ಯಾಜ್ಯದ ರಾಶಿ ಕಂಡು ಬರುತ್ತಿದೆ. ಅದರಲ್ಲೂ ಕೆ ಸಿ ರೋಡಿಗಿಂತ ಸ್ವಲ್ಪ ಮುಂಭಾಗದಲ್ಲಿ ಸೇತುವೆ ಸಮೀಪದಲ್ಲಿ ಎಸೆದಿರುವ ತ್ಯಾಜ್ಯದಿಂದಾಗಿ ಜನತೆ ಇಲ್ಲಿ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಇಲ್ಲಿ ಪ್ರತಿನಿತ್ಯ ನೋಡಿದರೂ ಹೆದ್ದಾರಿ ಪಕ್ಕದಲ್ಲೇ ಕಸದ ರಾಶಿ ಕಂಡು ಬರುತ್ತಿದೆ. ಕೆ ಸಿ ರೋಡಿನಿಂದ ಸುಮಾರು ಉಚ್ಚಿಲ, ಸೋಮೇಶ್ವರದವರೆಗೂ ಅಲ್ಲಲ್ಲಿ ಕಸದ ರಾಶಿ ಕಂಡು ಬರುತ್ತಿದೆ. ಇದಕ್ಕೆ ಕಾರಣ ನಿರ್ವಹಣೆ ಕೊರತೆ.

ಹೆದ್ದಾರಿ ಪಕ್ಕದಲ್ಲಿ ತ್ಯಾಜ್ಯವನ್ನು ತಂದು ಸುರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಈ ಹಿಂದೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ ಆರ್ ರವಿ ಸೂಚನೆ ನೀಡಿದ್ದರು. ಹೆದ್ದಾರಿ ಪಕ್ಕದ ತ್ಯಾಜ್ಯ ನಿರ್ವಹಣೆ ಮೇಲೆ ನಿಗಾ ವಹಿಸಲು ಪ್ರತ್ಯೇಕ ತಂಡ, ತ್ಯಾಜ್ಯ ಸಾಗಿಸಲು ಪ್ರತ್ಯೇಕ ವಾಹನವನ್ನೂ ಮಾಡಲಾಗಿತ್ತು. ಆದರೆ ಇದೀಗ ಏನಾಗಿದೆ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.

“ಹೆದ್ದಾರಿ ಮೂಲಕ ನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಆದರೆ ಕೆ ಸಿ ರೋಡು ತಲುಪುತ್ತಿದ್ದಂತೆ ಈ ತ್ಯಾಜ್ಯವೇ ಕಣ್ಣಿಗೆ ರಾಚುತ್ತಿದೆ. ಕಾಟಾಚಾರಕ್ಕೆಂಬಂತೆ ಯಾವಾಗಲೊಂದು ಬಾರಿ ಇಲ್ಲಿ ಸ್ವಚ್ಛತೆ ನಡೆಯುತ್ತದೆ. ಬಳಿಕ ಕೆಲವೇ ದಿನಗಳಲ್ಲಿ ಮತ್ತೆ ತ್ಯಾಜ್ಯದ ರಾಶಿ ತುಂಬಿಕೊಂಡಿರುತ್ತದೆ” ಎನ್ನುತ್ತಾರೆ ಕೆ ಸಿ ರೋಡು ನಿವಾಸಿ ಯಾಸಿನ್.