ರಾಷ್ಟ್ರೀಯ ಹೆದ್ದಾರಿ 66ರ ಪಕ್ಕ ಎಲ್ಲೆಡೆ ಕಸದ ರಾಶಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತೊಕ್ಕೊಟ್ಟಿನಿಂದ ತಲಪಾಡಿಯವರೆಗೆ ಇದೀಗ ರಸ್ತೆ ಚತುಷ್ಪಥವಾಗಿ ಸುಂದರವೇನೋ ಆಗಿದೆ. ಆದರೆ ಹೆದ್ದಾರಿ ಪಕ್ಕದಲ್ಲಿ ಎಲ್ಲಿ ನೋಡಿದರೂ ಕಸದ ತೊಟ್ಟಿಗಳು ಇಲ್ಲದಿರುವ ಕಾರಣ ತ್ಯಾಜ್ಯದ ರಾಶಿ ರಾಶಿ ರಸ್ತೆ ಪಕ್ಕ ಕಂಡು ಬರುತ್ತಿದೆ. ಅದರಲ್ಲೂ ಹೆದ್ದಾರಿ 66ರಲ್ಲಿ ನೀವು ಸಾಗಿದರೆ ಕುತ್ತಾರ್, ದೇರಳಕಟ್ಟೆ, ನಾಟೆಕಲ್, ಅಸೈಗೋಳಿ ಮತ್ತಿತರ ಕಡೆಗಳಲ್ಲಿ ತ್ಯಾಜ್ಯದ ರಾಶಿ ಕಂಡು ಬರುತ್ತಿದ್ದು, ಪ್ರಯಾಣಿಕರಿಗೆ ದುರ್ನಾತ ಹೊಡೆಯುತ್ತಿದೆ. ಈ ಕಸದ ರಾಶಿ ಸಾಂಕ್ರಾಮಿಕ ರೋಗಗಳ ಹರಡುವಿಕೆಗೂ ಕಾರಣವಾಗುತ್ತಿದೆ.

ಕಸದ ತೊಟ್ಟಿಗಳು ಇಲ್ಲದ ಕಾರಣ ಇಲ್ಲಿ ಎಸೆಯಲಾಗುತ್ತಿರುವ ತ್ಯಾಜ್ಯಗಳು, ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯ ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಂಡುಬರುತ್ತಿದೆ. ನಾಯಿಗಳು, ಜಾನುವಾರುಗಳು, ಹಕ್ಕಿಗಳು ಇವುಗಳನ್ನು ಎಳೆದಾಡಿಕೊಂಡು ಇಡೀ ರಸ್ತೆಯುದ್ದಕ್ಕೂ ಚೆಲ್ಲಾಡಿ ಬಿಡುತ್ತಿವೆ.

ರಾಷ್ಟ್ರೀಯ ಹೆದ್ದಾರಿ ಕುಂಪಲ ಬೈಪಾಸ್ ಬಳಿ ಹಾಕಲಾಗಿರುವ ಸೂಚನಾ ಫಲಕದಲ್ಲಿ `ರಸ್ತೆ(ಹೆದ್ದಾರಿ) ಪಕ್ಕದಲ್ಲಿ ಕಸದ ರಾಶಿಯನ್ನು ಹಾಕಬಾರದು. ಕಾನೂನು ಮೀರಿದರೆ ದಂಡ ವಿಧಿಸಲಾಗುವುದು. ಪರಿಸರ ಸ್ವಚ್ಛತೆಯನ್ನು ಕಾಪಾಡಲು ಸಹಕರಿ” ಎಂದು ಬೋರ್ಡ್ ಹಾಕಿದ್ದರೂ 20ರಿಂದ 30 ಮೀಟರಿನೊಳಗೇ ತ್ಯಾಜ್ಯದ ರಾಶಿ ರಾಶಿ ಗುಡ್ಡವೇ ಕಾಣುತ್ತಿದೆ.