ಜೈಲಿನಲ್ಲಿ ಕಡಲೆಕಾಯಿ ಸಿಪ್ಪೆಯೊಳಗೆ ಗಾಂಜಾ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಬೆಳಗಾವಿ : ವಿವಿಧ ರೀತಿಯಲ್ಲಿ ಜೈಲಿನೊಳಗೆ ಗುಪ್ತವಾಗಿ ಗಾಂಜಾ ಸಾಗಾಟಮಾಡುತ್ತಿರುವ ಪ್ರಕರಣಗಳು ಈ ಹಿಂದೆ ಪತ್ತೆಯಾಗಿದ್ದವು. ಆದರೆ ಇದೀಗ ಕಡಲೆ ಕಾಯಿ(ಶೇಂಗಾ) ಸಿಪ್ಪೆಯೊಳಗೆ ಗಾಂಜಾವನ್ನು ತುಂಬಿ ಅದರ ಸಿಪ್ಪೆಯನ್ನು ಮತ್ತೆ ಅಂಟಿಸಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಸಾಗಾಟ ಮಾಡಿದ ಪ್ರಕರಣ ಪತ್ತೆಯಾಗಿದೆ. ಈ ಕೃತ್ಯ ಬೆಳಕಿಗೆ ಬಂದಿರೋದು ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ.

ಇಲ್ಲಿನ ಜೈಲಿನೊಳಗೆ ಬಂಧಿಯಾಗಿದ್ದ ಗಾಂಜಾ ವ್ಯಸನಿಯೊಬ್ಬರನ್ನು ಕಾಣುವುದಕ್ಕೆ ಅವರ ಆತ್ಮೀಯರೊಬ್ಬರು ಶುಕ್ರವಾರ ಬಂದಿದ್ದರು. ಅವರ ಬಗ್ಗೆ ಅನುಮಾನ ಬಂದು ಅಲ್ಲಿನ ಸಿಬ್ಬಂದಿಗಳು ಸಂದರ್ಶಕರ ಕೊಠಡಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಆಗ ಅವರ ಬಳಿ ಎರಡು ಮುಷ್ಠಿಯಷ್ಟು ಕಡಲೆ ಕಾಯಿ ಪತ್ತೆಯಾಗಿದೆ. ಇದನ್ನು ಸರಿಯಾಗಿ ಪರಿಶೀಲಿಸಿದಾಗ ಅದರೊಳಗೆ ಗಾಂಜಾ ತುಂಬಿರುವುದು ಗೊತ್ತಾಗಿದೆ. ಕೂಡಲೇ ಸಿಬ್ಬಂದಿಗಳು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.