ಪುರುಷರೇ ಎಚ್ಚರ, ರಸ್ತೆಗಳಲ್ಲಿ ಕಳ್ಳಿಯರ ಗ್ಯಾಂಗ್ ಸಕ್ರಿಯ !

ಬೆಂಗಳೂರು : ನಿರ್ಜನ ರಸ್ತೆಗಳಲ್ಲಿ ಒಬ್ಬಂಟಿ ಮಹಿಳೆಯರು ಮಾತ್ರ ಅಸುರಕ್ಷಿತರು ಎಂದು ಹೇಳುವ  ಕಾಲ ಮುಗಿದು ಹೋಯಿತೇನೋ. ಬೆಂಗಳೂರಿನಲ್ಲಿ ಇತ್ತೀಚೆಗೆ ಸಕ್ರಿಯವಾಗಿರುವ ಕಳ್ಳಿಯರ ಗ್ಯಾಂಗ್ ಒಂದರಿಂದ ಒಬ್ಬಂಟಿ  ಪುರುಷರಿಗೂ ಅಪಾಯ ಕಾದಿದೆ. ನಗರದ ರಸ್ತೆಗಳಲ್ಲಿ  ಬೆಳಗ್ಗಿನ ಹಾಗೂ ಸಂಜೆಯ ಹೊತ್ತು ಕಾರುಗಳಲ್ಲಿ ಒಬ್ಬಂಟಿಯಾಗಿ ಸಂಚರಿಸುವ ಪುರುಷರು ಯಾ ವಾಕಿಂಗ್ ಹೋಗುವ ಹಿರಿಯರು ತೀರಾ ಎಚ್ಚರಿಕೆಯಿಂದಿರಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕಳ್ಳಿಯರ ಗ್ಯಾಂಗ್ ಲೀಲಾಜಾಲವಾಗಿ ಯಾವುದೇ ಭಯವಿಲ್ಲದೆ ತಮ್ಮ ಕಾರ್ಯ ಸಾಧಿಸುತ್ತಿದೆ. ಈ ಬಗ್ಗೆ ಹಲವಾರು ದೂರುಗಳೂ ದಾಖಲಾಗುತ್ತಿವೆ.

ಇತ್ತೀಚೆಗೆ ಇಂದಿರಾನಗರ 12ನೇ ಮೈನ್ ಕಡೆ ಸಾಗುತ್ತಿದ್ದ ಯುವ ಉದ್ಯಮಿಯೊಬ್ಬರು ತಮ್ಮ ಸ್ನೇಹಿತರನ್ನು ಜೆ ಬಿ ನಗರ ಮತ್ತು ದೊಮ್ಲೂರು ಎಂಬಲ್ಲಿಳಿಸಿ ಮುಂದೆ ಎದುರಾದ ಸಿಗ್ನಲ್ ಪಕ್ಕ  ಕಾರು ನಿಲ್ಲಿಸಿದಾಗ ಮಹಿಳೆಯೊಬ್ಬಳು ಅವರನ್ನೇ ದಿಟ್ಟಿಸಿ ನೋಡಿ ನಕ್ಕು  ಅಶ್ಲೀಲ ಸಂಜ್ಞೆಯೊಂದನ್ನು ಮಾಡಿದಳು. ಅವರು ಕ್ಯಾರೇ ಮಾಡದೇ ಇದ್ದರೂ ಇನ್ನೊಬ್ಬಳು ಕಾರಿನ ಬಾಗಿಲು ತೆಗೆದು ಒಳಗೆ ಬಂದೇ ಬಿಟ್ಟು, ಉದ್ಯಮಿಯ ಕೊರಳ ಸುತ್ತ ಕೈ ಹಾಕಿ ತನಗೆ ಮುತ್ತೊಂದನ್ನು ನೀಡುವಂತೆ ಹೇಳಿದ್ದಳು. ಸಿಗ್ನಲ್ ಕಳೆದು ಕಾರು ಮುಂದೆ ಸಾಗಿದರೂ ಆಕೆ ಜಪ್ಪಯ್ಯ ಅಂದರೂ ಇಳಿಯಲೇ ಇಲ್ಲ. ಹೆದರದೆ ಉದ್ಯಮಿ ಆಕೆಯನ್ನು ಇಳಿಯುವಂತೆ ಇಲ್ಲದೇ ಹೋದರೆ ಪೊಲೀಸ್ ದೂರು ನೀಡುವುದಾಗಿ ಎಚ್ಚರಿಸಿದರು. ಕೊನೆಗೆ ಆಕೆ ಒಂದೆಡೆ ಕಾರಿನಿಂದಿಳಿದಿದ್ದಳು. ಮನೆಗೆ ಬಂದ ಉದ್ಯಮಿ ನಡೆದ ಘಟನೆ ತಮ್ಮ ಪತ್ನಿಗೆ ವಿವರಿಸುತ್ತಿದ್ದಾಗಲೇ ಅವರಿಗೆ ತಮ್ಮ ಕೊರಳಲ್ಲಿದ್ದ 50 ಗ್ರಾಂ ತೂಕದ ಚಿನ್ನದ ಸರ ಕಾಣೆಯಾಗಿದೆ ಎಂದು ತಿಳಿದುಬಂದಿತ್ತು.

ಆಶ್ಚಂiÀರ್iವೆಂದರೆ ಈ ಘಟನೆ ನಡೆದಾಗ ರಸ್ತೆಯಲ್ಲಿ ಹಲವಾರು ವಾಹನಗಳಿದ್ದವು. ಇನ್ನೊಂದು ಪ್ರಕರಣದೆಲ್ಲಿ ಯುವಕರೊಬ್ಬರು ಕಾರಿನಲ್ಲಿ ಅಲಸೂರು ಸಮೀಪ ಸಾಗುತ್ತಿದ್ದಾಗ ವಾಹನವನ್ನು ಹತ್ತಿದ ಯುವತಿಯೊಬ್ಬಳು ತನ್ನ ಟಿ-ಶರ್ಟ್ ಬಿಚ್ಚಿ  ಆಕೆಗೆ ಹಣ ನೀಡದೇ ಇದ್ದರೆ ಬೊಬ್ಬಿಡುವುದಾಗಿ ಬೆದರಿಸಿದ್ದಳು. ಆತ ಹಣ ನೀಡಲು ಪರ್ಸ್ ತೆಗೆಯುತ್ತಿದ್ದಂತೆಯೇ ಅದನ್ನೂ ಆತನ ಮೊಬೈಲನ್ನೂ ಎಗರಿಸಿ ಆಕೆ ಪರಾರಿಯಾಗಿದ್ದಳು. ಇವರಂತೆಯೇ ನಿವೃತ್ತ ಡಿಆರ್ಡಿಒ ಅಧಿಕಾರಿಯೊಬ್ಬರು ಈ ಜಾಲದ ವಂಚನೆಗೆ ಬಲಿ ತಮ್ಮಲ್ಲಿದ್ದ ರೂ 3000 ಹಾಗೂ ಚಿನ್ನದುಂಗುರವನ್ನು ಆಕೆಯ ಕೈಗಿತ್ತಿದ್ದರು.

ಈ ಕಳ್ಳಿಯರ ಗ್ಯಾಂಗ್ ಇಂದಿರಾನಗರ, ಅಲಸೂರು, ಜೆ ಬಿ ನಗರ ಮುಂತಾದೆಡೆ ಸಕ್ರಿಯವಾಗಿದೆಯೆನ್ನಲಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಪುರುಷರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣ ಕೀಳುತ್ತಿದೆ.  ಪೊಲೀಸ್ ದೂರು ದಾಖಲಿಸಿದರೆ ಉಂಟಾಗುವ ರಗಳೆಯಿಂದ ಬೆದರಿ ಹಲವರು ಈ ಕಳ್ಳಿಯರ ಮೋಸಕ್ಕೆ ಬಲಿಬಿದ್ದ ಪ್ರಸಂಗಗಳೂ ಇವೆ.

ಈ ಜಾಲವನ್ನು ಬೇಧೀಸಲು ಪೊಲೀಸರು  ಶತಪ್ರಯತ್ನ ನಡೆಸುತಿದ್ದಾರೆ. ಮಹಿಳಾ ಪೊಲೀಸರೂ ಈ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದು ರಾತ್ರಿ ಹೊತ್ತು ಸಂಶಯಾಸ್ಪದವಾಗಿ ತಿರುಗುವ ಮಹಿಳೆಯರ ಮೇಲೆ ಕಣ್ಣಿಟ್ಟಿದ್ದಾರೆ.