ಯುವಕಗೆ ತಂಡ ಮಾರಣಾಂತಿಕ ಹಲ್ಲೆ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಆಟೋದಲ್ಲಿ ಬಂದ ಆರು ಜನರ ತಂಡವೊಂದು ಅಂಗಡಿ ಮುಂದೆ ನಿಂತಿದ್ದ ಯುವಕನ ಮೇಲೆ ರಾಡ್ ಮತ್ತು ಸೋಡಾ ಬಾಟ್ಲಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಕನ್ಯಾನದಲ್ಲಿ ನಡೆದಿದೆ.

ಕನ್ಯಾನ ಸಮೀಪದ ಮರ್ತನಾಡಿ ನಿವಾಸಿ ನಾರಾಯಣ ಬೆಳ್ಚಡರ ಪುತ್ರ ದಿನೇಶ್ (22) ತಂಡದಿಂದ ಹಲ್ಲೆಗೊಳಗಾದ ಯುವಕ. ಭಾನುವಾರ ಸಂಜೆ ಕನ್ಯಾನ ಪೇಟೆಯಲ್ಲಿನ ಫಾಸ್ಟ್ ಫುಡ್ ಅಂಗಡಿ ಮುಂದೆ ತನ್ನ ಸ್ನೇಹಿತ ಚಂದ್ರಹಾಸ ಜೊತೆ ದಿನೇಶ್ ನಿಂತಿದ್ದನೆನ್ನಲಾಗಿದೆ. ಅದೇ ಸಂದರ್ಭ ಆಟೋದಲ್ಲಿ ಬಂದ ಆರು ಜನರ ತಂಡ ದಿನೇಶ್ ಮೇಲೆ ಮುಗಿಬಿದ್ದು, ರಾಡ್ ಮತ್ತು ಸೋಡಾ ಬಾಟ್ಲಿಯಿಂದ ಏಕಾಏಕಿ ಹಲ್ಲೆ ನಡೆಸಿತ್ತೆನ್ನಲಾಗಿದೆ.

ದಿನೇಶ್ ಮುಖ ಮತ್ತು ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮರ್ತನಾಡಿ ನಿವಾಸಿಗಳಾದ ಸತೀಶ್, ಚಂದ್ರಹಾಸ, ರಮೇಶ್, ಸದಾಶಿವ, ನಾರಾಯಣ ಮತ್ತು ಮಾಧವ ತನ್ನ ಮೇಲೆ ಹಲ್ಲೆ ನಡೆಸಿದ ಆರೋಪಿಗಳೆಂದು ಗಾಯಾಳು ಪೊಲೀಸರಿಗೆ ದೂರು ನೀಡಿದ್ದಾನೆ. ವಿಟ್ಲ ಎಸೈ ಹೆಚ್ ಇನಾಗರಾಜ್ ಮತ್ತು ಸಿಬ್ಬಂದಿ ಆಸ್ಪತ್ರೆಗೆ ತೆರಳಿ ಗಾಯಾಳುವಿನ ಹೇಳಿಕೆ ಪಡೆದಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ತನ್ನ ಮೇಲೆ ಧ್ವೇಷ ಹೊಂದಿದ್ದ ಕನ್ಯಾನದ ವ್ಯಕ್ತಿಗಳಿಬ್ಬರು ಹಲ್ಲೆ ನಡೆಸಲು ಆರೋಪಿಗಳಿಗೆ ಕುಮ್ಮಕ್ಕು ನೀಡಿದ್ದಾರೆಂದು ಗಾಯಾಳು ಹೇಳಿದ್ದಾನೆ.