ಪುತ್ತೂರು ಗಾಂಧಿಕಟ್ಟೆ ದುಃಸ್ಥಿತಿ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಗಾಂಧೀಜಿ ಪುತ್ತೂರಿಗೆ ಭೇಟಿ ನೀಡಿದ ನೆನಪಿಗಾಗಿ ಬಸ್ ನಿಲ್ದಾಣದ ಬಳಿ ಗಾಂಧಿಕಟ್ಟೆಯನ್ನು ನಿರ್ಮಿಸಲಾಗಿದೆ. ಕಟ್ಟೆಯಲ್ಲಿ ಹಲವು ವರ್ಷಗಳ ಹಿಂದೆ ಮಹಾತ್ಮರ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ. ಅಂದಿನಿಂದ ಇಂದಿನವರೆಗೆ ಗಾಂಧೀಜಿಗೆ ಅವಮಾನ ಮಾಡುವುದು ತಪ್ಪಿಲ್ಲ. ಅಷ್ಟಕ್ಕೂ ಗಾಂಧಿಗೆ ಅವಮಾನ ಮಾಡುವವರು ಪುತ್ತೂರಿನ ಜನರಲ್ಲ, ಬದಲಾಗಿ ಪುತ್ತೂರಿಗೆ ಹೊರಗಿನಿಂದ ಬರುವ ಕಾರ್ಮಿಕರು.

ಹೊರ ಊರಿನ ಕಾರ್ಮಿಕರು ಪುತ್ತೂರಿಗೆ ಬಂದಾಗ ಅವರಿಗೆ ಮೊದಲು ಕಾಣ ಸಿಗುವುದೇ ಗಾಂಧಿಕಟ್ಟೆ. ವಿಶ್ರಾಂತಿ ಪಡೆಯಲು ಕಟ್ಟೆಯಲ್ಲೇ ಬಂದು ಕುಳಿತುಕೊಳ್ಳುತ್ತಾರೆ. ಪಕ್ಕದಲ್ಲೇ ಬಾರ್ ಇರುವ ಕಾರಣ ಕಂಠಪೂರ್ತಿ ಕುಡಿದು ಬಂದು ಅಲ್ಲೇ ಬಿದ್ದುಕೊಳ್ಳುತ್ತಾರೆ. ಬೆಳಿಗ್ಗೆಯಿಂದ ರಾತ್ರಿ ತನಕ ಕುಡಿದು ಅಲ್ಲೇ ಬಿದ್ದುಕೊಂಡಿದ್ದರೂ ಅವರನ್ನು ಎಬ್ಬಿಸುವ ಮಂದಿ ಪುತ್ತೂರಲ್ಲಿಲ್ಲ.

ಮದ್ಯಪಾನ ಮಾಡಬೇಡಿ ಎಂದು ಯಾವ ಗಾಂಧಿ ಹೇಳಿದ್ದರೋ ಅದೇ ಗಾಂಧೀಜಿಯ ಕಾಲ ಬಳಿ ಕುಡಿದು ಬಿದ್ದುಕೊಂಡಿರುವುದು ಎಂಥ ವಿಪರ್ಯಾಸ. ಕಳೆದ ಐದು ವರ್ಷಗಳ ಹಿಂದೆ ಗಾಂಧಿಕಟ್ಟೆಯನ್ನು ಅಭಿವೃದ್ಧಿ ಮಾಡಲಾಗಿತ್ತು. ಗಾಂಧೀ ಪ್ರತಿಮೆಯಲ್ಲಿ ಏನೆಲ್ಲಾ ಇರಬೇಕಿತ್ತೋ ಅದೆಲ್ಲವೂ ಇತ್ತು. ಕ್ರಮೇಣ ಕುಡುಕರು ಗಾಂಧಿ ಕೈಯ್ಯಲ್ಲಿದ್ದ ಕೋಲನ್ನು ಕಳವು ಮಾಡಿದ್ದರು. ಆ ಬಳಿಕ ಕನ್ನಡಕವನ್ನು ಕದ್ದೊಯ್ದರು. ಇದು ಗೊತ್ತಾಗಿ ಯಾರೋ ಗಾಂಧಿ ಅಭಿಮಾನಿಗಳು ಕೋಲು ಮತ್ತು ಕನ್ನಡಕವನ್ನು ಮತ್ತೆ ಜೋಡಿಸಿದ್ದಾರೆ. ಕಟ್ಟೆಯ ಮೇಲೆ ಕುಳಿತು ವಿಶ್ರಾಂತಿ ಪಡೆಯುವ ಕುಡುಕರನ್ನು ತಡೆಯಬೇಕಾದ ಪೊಲೀಸರು ಯಾಕೆ ಸುಮ್ಮನಾಗಿದ್ದಾರೊ ಗೊತ್ತಿಲ್ಲ. ಕಟ್ಟೆಗೆ ಒಳಪ್ರವೇಶ ಮಾಡದಂತೆ ಯಾಕೆ ತಡೆ ಬೇಲಿಯನ್ನು ನಿರ್ಮಿಸಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ ವರ್ಷಕ್ಕೊಂದು ಬಾರಿ ಆಗಸ್ಟ್ 15ರಂದು ಗಾಂಧಿಕಟ್ಟೆ ಸ್ವಚ್ಛ ಮಾಡಲಾಗುತ್ತದೆ ಅಥವಾ ಯಾರಾದರೂ ಪ್ರತಿಭಟನೆ ಮಾಡಿದ ದಿನ ಪ್ರತಿಮೆಗೊಂದು ಮಾಲೆ ಹಾಕಿ ತೆರಳುವುದನ್ನು ಬಿಟ್ಟರೆ ಪುತ್ತೂರಿನ ಮಂದಿ ಗಾಂಧಿಯ ಮಹತ್ವವನ್ನೇ ಮರೆತುಬಿಟ್ಟಿದ್ದಾರೆ.