ರಾಜಾರೋಷ ನಡೆಯುತ್ತಿದೆ ಇಸ್ಪೀಟ್ ಜುಗಾರಿ ಕ್ಲಬ್

ಸಾಂದರ್ಭಿಕ ಚಿತ್ರ

ಕರಾವಳಿ ಅಲೆ ವರದಿ

ಉಡುಪಿ : ರಾಷ್ಟ್ರೀಯ ಹೆದ್ದಾರಿ-66ರ ಬ್ರಹ್ಮಾವರದಲ್ಲಿನ ಹೊಟೇಲೊಂದರಲ್ಲಿ ರಾಜಕೀಯ ಪಕ್ಷವೊಂದರ ಮುಖಂಡರೊಬ್ಬರ ಇಸ್ಪೀಟು ಜುಗಾರಿ ಕ್ಲಬ್ ಹಗಲು-ರಾತ್ರಿಯೆನ್ನದೇ ನಡೆಯುತ್ತಿದ್ದರೂ, ಬ್ರಹ್ಮಾವರ ಠಾಣಾ ಪೊಲೀಸರಾಗಲೀ, ಉಡುಪಿ ಎಸ್ಪಿಯಾಗಲೀ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರು ವ್ಯಾಪಕವಾಗಿ ಕೇಳಿಬಂದಿದೆ.

ಇಸ್ಪೀಟು ಜುಗಾರಿ ಕ್ಲಬ್ ಬಗ್ಗೆ ಹಿಂದಿನ ಉಡುಪಿ ಜಿಲ್ಲಾ ಎಸ್ಪಿ ಸಂಜೀವ ಪಾಟೀಲರಿಗೆ ಫೋನ್ ಇನ್ ಕಾರ್ಯಕ್ರಮದಲ್ಲಿ ಸ್ಥಳೀಯ ನಾಗರಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಸಂಜೀವ ಪಾಟೀಲ್ ದಾಳಿ ನಡೆಸಿದಾಗ ಪೊಲೀಸರಿಂದ ಮಾಹಿತಿ ಸೋರಿಕೆಯಾಗಿ ದಾಳಿ ವಿಫಲಗೊಳ್ಳುವ ಮೂಲಕ ಪೊಲೀಸರು ಇಸ್ಪೀಟು ಜುಗಾರಿ ಕ್ಲಬ್ ನಡೆಸುವ ರಾಜಕೀಯ ಮುಖಂಡನೊಂದಿಗೆ ಶಾಮೀಲಾಗಿರುವುದು ಸಾಬೀತಾಗಿತ್ತು ಎಂದು ತಿಳಿದುಬಂದಿದೆ.

ಬಳಿಕ ಇದೀಗ ಎಸ್ಪಿಯಾಗಿರುವ ಲಕ್ಷ್ಮಣ ನಿಂಬರಗಿ ಅವರಿಗೂ ಕಳೆದ ಶುಕ್ರವಾರ ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿಯೂ ಈ ಇಸ್ಪೀಟು ಜುಗಾರಿ ಕ್ಲಬ್ ಬಗ್ಗೆ ನಾಗರಿಕರು ದೂರು ನೀಡಿದ್ದಾರೆ. ಆದರೆ ಇಲ್ಲಿಯತನಕ ರಾಜಕೀಯ ಮುಖಂಡನ ಇಸ್ಪೀಟು ಜುಗಾರಿ ಕ್ಲಬ್ಬಿಗೆ ಸ್ಥಳೀಯ ಬ್ರಹ್ಮಾವರ ಪೊಲೀಸ್ ಅಧಿಕಾರಿಯಾಗಲೀ, ಇನ್ನಿತರ ಪೊಲೀಸ್ ದಳಗಳಾಗಳೀ ಹಾಗೂ ಉಡುಪಿ ಎಸ್ಪಿ ಲಕ್ಷ್ಮಣ ನಿಂಬರಗಿಯಾಗಲೀ ದಾಳಿ ನಡೆಸಿಲ್ಲ.

ಕುಟುಂಬಗಳನ್ನು ಬೀದಿಪಾಲು ಮಾಡುವ ಹಾಗೂ ಅಪರಾಧ ಚಟುವಟಿಕೆಗಳಿಗೆ ಆಸ್ಪದ ನೀಡುತ್ತಿರುವ, ಹಗಲು-ರಾತ್ರಿ ಎನ್ನದೇ ನಡೆಯುತ್ತಿರುವ ಇಸ್ಟೀಟು ಜುಗಾರಿ ಕ್ಲಬ್ಬನ್ನು ಕೂಡಲೇ ಉಡುಪಿ ಎಸ್ಪಿ ಲಕ್ಷ್ಮಣ ನಿಂಬರಗಿ ಬಂದ್ ಮಾಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

LEAVE A REPLY