ಪಾಕಿಸ್ತಾನದಿಂದ-ತಿರುವನಂತಪುರಂತನಕ : 7 ಪತ್ನಿಯರು, 56 ಮಕ್ಕಳು

ಕೇರಳದ ಲೈಂಗಿಕ ತಜ್ಞನೊಬ್ಬನ ಜೀವನದ ರೋಚಕ ಕಥೆಯಿದು

ತಿರುವನಂತಪುರಂ ನಗರದ ದೈನಿಕಗಳಲ್ಲಿ 70ರ ಹಾಗೂ 80ರ ದಶಕಗಳ ದೈನಿಕಗಳಲ್ಲಿ  ಲೈಂಗಿಕ ತಜ್ಞ ಎಂ ಎಸ್ ಸರ್ಕಾರ್ ಡಿಸ್ಪೆನ್ಸರಿಯ ಒಂದು ಪುಟ್ಟ ಜಾಹೀರಾತು ಸಾಮಾನ್ಯವಾಗಿತ್ತು. ಎಲ್ಲಾ ವಿಧದ ಲೈಂಗಿಕ ಸಮಸ್ಯೆಗಳಿಗೆ ಅಲ್ಲಿ ಪರಿಹಾರ ದೊರೆಯುವುದೆಂದು ಜಾಹೀರಾತಿನಲ್ಲಿ ಬರೆಯಲಾಗಿತ್ತು. ಇದೇ ಜಾಹೀರಾತು ಈಗಲೂ ಪ್ರಕಟಗೊಳ್ಳುತ್ತಿದೆ – ಆದರೆ ಲೈಂಗಿಕ ತಜ್ಞರ ಮೊಬೈಲ್ ಫೋನ್ ಸಂಖ್ಯೆ ಹಾಗೂ ವೆಬ್ ಸೈಟ್ ವಿಳಾಸ ಮಾತ್ರ ಈಗ ಈ ಜಾಹೀರಾತಿನಲ್ಲಿ ಎದ್ದು ಕಾಣುವ ಬದಲಾವಣೆ.  ಜಾಹೀರಾತಿನಲ್ಲಿ ಈಗಲೂ ಗಂಭೀರ ಮೊಗದ ಹಿರಿಯ ವೈದ್ಯನ ಚಿತ್ರವಿದೆ. ಅವರೇ ಯುನಾನಿ ವೈದ್ಯ ಎಂ ಎಸ್ ಸರ್ಕಾರ್.

ಏಳು ಮಂದಿ ಪತ್ನಿಯರು ಹಾಗೂ 56 ಮಕ್ಕಳನ್ನು ಹೊಂದಿದ ಅವರ ಬದುಕಿನ ಕಥೆ ವರ್ಣರಂಜಿತವೆಂದರೆ ತಪ್ಪಾಗಲಾರದು. ಪಾಕಿಸ್ತಾನದಿಂದ ತಿರುವನಂತಪುರಂವರೆಗಿನ ಅವರ ಪಯಣದ ಹಿಂದಿನ ಕಥೆ ರೋಚಕ.

ಹಲವಾರು ವರ್ಷಗಳ ಹಿಂದೆ ಪಾಕಿಸ್ತಾನದ ಜಲಂಧರ್ ನಗರದಲ್ಲಿ ರಾಜಮನೆತನದವರ ವೈದ್ಯರಾಗಿದ್ದವರು ಹಾಜಿ ನವಾಬ್ ಆಲಿ ಖಾನ್. ಅವರದ್ದು ಯುನಾನಿ ವೈದ್ಯರ ಕುಟುಂಬ. ಆದರೆ ಆಲಿ ಖಾನ್ ಅದೆಷ್ಟು ಶಿಸ್ತಿನ ಮನುಷ್ಯನೆಂದರೆ ತಮ್ಮ ಮೊಮ್ಮಗ  ಮೊಹಮ್ಮದ್ ಸಯ್ಯದನಿಗ ಆತನಿಗಿಷ್ಟವಾದ ಯುವತಿಯನ್ನು  ಮದುವೆಯಾಗಲು ಹಲವು  ಮನವಿಗಳ ಹೊರತಾಗಿಯೂ ಒಪ್ಪಲಿಲ್ಲ. ಆಲಿ ಖಾನ್ ಆ ಯುವತಿಯನ್ನು ರಹಸ್ಯ ಸ್ಥಳದಲ್ಲಿ ಅಡಗಿಸಿಟ್ಟರು. ಇದರಿಂದ  ತೀರಾ ನೊಂದು  ಪಾಕಿಸ್ತಾನವನ್ನೇ ತೊರೆದ  ಮೊಹಮ್ಮದ್ ಸಯ್ಯದ್  ಉತ್ತರ ಪ್ರದೇಶಕ್ಕೆ  ತಮ್ಮ ತಂದೆ, ಅಬ್ದುಲ್ ವಾಹಿದ್, ಅವರ ಇಬ್ಬರು ಪತ್ನಿಯರೊಂದಿಗೆ ಬಂದಿದ್ದರು. ಆಗ ದೇಶ ವಿಭಜನೆಯ ಕಾಲವಾಗಿದ್ದರಿಂದ ಜನರು ಪಾಕಿಸ್ತಾನದಿಂದ ಬಂದ ಈ ಯುನಾನಿ ಲೈಂಗಿಕ ತಜ್ಞನನ್ನು ಸಂಶಯದ ದೃಷ್ಟಿಯಿಂದಲೇ ನೋಡಿದ್ದರು.

ಕೊನೆಗೆ ಈ ಸಮಸ್ಯೆಗೆ ಸಯ್ಯದ್ ಪರಿಹಾರವನ್ನೂ ಕಂಡುಕೊಂಡರು. ತಮ್ಮ ಹೆಸರನ್ನೇ ಎಂ ಎಸ್ ಸರ್ಕಾರ್ ಎಂದು ಬದಲಾಯಿಸಿಬಿಟ್ಟರು. ಸ್ವಲ್ಪ ಸಮಯದಲ್ಲೇ ತಮ್ಮ ಕುಟುಂಬಕ್ಕೆ ವಿದಾಯ ಹೇಳಿ ಸರ್ಕಾರ್ ಉತ್ತರ ಪ್ರದೇಶದಿಂದ ಹೊರಟು  ಮಂಗಳೂರು, ಮಧುರೈ, ಚೆನ್ನೈ, ಕಣ್ಣೂರು, ಎರ್ನಾಕುಲಂ ನಗರಗಳಲ್ಲಿ ಕ್ಲಿನಿಕ್ಕುಗಳನ್ನು ಸ್ಥಾಪಿಸಿ ಅಂತಿಮವಾಗಿ ತಿರುವನಂತಪುರಂಗೆ ಬಂದಿದ್ದರು. ಆದರೆ ಈ ನಡುವೆ ಅವರು  ಏಳು ವಿವಾಹವಾಗಿದ್ದರು ಹಾಗೂ ಈ ಏಳು ವಿವಾಹಗಳಿಂದ 56 ಮಕ್ಕಳನ್ನೂ ಪಡೆದಿದ್ದಾರೆ.

70ರ ದಶಕದಲ್ಲಿ ಅವರು ತಿರುವನಂತಪುರಂಗೆ ಬಂದಾಗ ಅದೇಕೋ ಅವರಿಗೆ ಆ ನಗರದ ಮೇಲೆ ಪ್ರೀತಿಯುಕ್ಕಿತು. ಈಸ್ಟ್ ಫೋರ್ಟ್ ಪ್ರದೇಶದಲ್ಲಿ ಕ್ಲಿನಿಕ್ ಸ್ಥಾಪಿಸಿದರೂ ಅವರಿಗೆ ಮಲಯಾಳಂನ ಒಂದು ಪದವೂ ಬರುತ್ತಿರಲಿಲ್ಲ. ಆದರೂ  ತಮ್ಮ ಲೈಂಗಿಕ ಸಮಸ್ಯೆಗಳ ಬಗ್ಗೆ ಯಾರೂ ಕೇಳದೇ ಇರುವಂತಹ ಸಮಯದಲ್ಲಿ ಬಂದ ಈ  ವೈದ್ಯನ ಪ್ರವೇಶ ಅಲ್ಲಿನ ಜನರಿಗೆ  ಸಂತಸ ನೀಡಿತ್ತು ಹಾಗೂ ಜನ ಅವರ ಕ್ಲಿನಿಕ್ಕಿಗೆ ಬರಲಾರಂಭಿಸಿದ್ದರು. ಅವರ ಸಮಸ್ಯೆಗಳನ್ನು ಕ್ಲಿನಿಕ್ಕಿನಲ್ಲಿದ್ದ ಕಂಪೌಂಡರ್ ಮುಖಾಂತರ ಅರಿತು ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಕಟ್ಟುಮಸ್ತಾದ ದೇಹ,  ಆತ್ಮವಿಶ್ವಾಸದ ಪ್ರತೀಕದಂತಿದ್ದ ಸರ್ಕಾರ್ ಬಹಳ ಬೇಗ ಜನಪ್ರಿಯರಾಗಿದ್ದರು.

ಬಹಳ ಶಿಸ್ತಿನ ಸಿಪಾಯಿಯಾಗಿದ್ದ ಸರ್ಕಾರ್ ಕ್ಲಿನಿಕ್ಕಿನಲ್ಲಿ ರಶ್ ಕಡಿಮೆಯಿದ್ದ ದಿನಗಳಲ್ಲಿ ತಮ್ಮ ಕುಟುಂಬವನ್ನು ತಮ್ಮ  ಮಾರ್ಕ್ 3 ಅಂಬಾಸಿಡರ್ ಅಥವಾ ಕಾಂಟೆಸ್ಸಾ ಕಾರಿನಲ್ಲಿ ಬೀಚಿಗೆ ಕರೆದುಕೊಂಡು ಹೋಗುತ್ತಿದ್ದರು.

ವಿಶೇಷತೆಯೆಂದರೆ ಅವರ ಎಲ್ಲಾ ಪತ್ನಿಯರು ಹಾಗೂ ಮಕ್ಕಳೂ ಒಂದೇ ಮನೆಯಲ್ಲಿದ್ದರು. ಅಲ್ಲಿ ಮಕ್ಕಳ ವಿಚಾರಗಳಲ್ಲಿ ಜಗಳಗಳು ನಡೆಯುತ್ತಿದ್ದರೂ ಸರ್ಕಾರ್ ಮನೆಗೆ ಪ್ರವೇಶಿಸಿದರೆಂದರೆ ಎಲ್ಲವೂ ತಣ್ಣಗಾಗಿಬಿಡುತ್ತಿತ್ತು.

ಈಗ 93  ವರ್ಷದ  ಎಂ ಎಸ್ ಸರ್ಕಾರ್ ಆಲ್ಝೀಮರ್ಸ್ ಕಾಯಿಲೆಯಿಂದ ಬಳಲುತ್ತಿದ್ದು ಅವರ ಪುತ್ರ  ಎಸ್ ಕೆ ಸರ್ಕಾರ್ ತಮ್ಮ ತಂದೆಯ ಹೆಸರಿನ ಕ್ಲಿನಿಕ್ ನಡೆಸುತ್ತಿದ್ದಾರೆ. ತಮ್ಮ  ಪಾಕಿಸ್ತಾನದಿಂದ-ತಿರುವನಂತಪುರಂ ಪಯಣದ ಬಗ್ಗೆ ಹೆಚ್ಚೇನೂ ನೆನಪಿಸಲು  ಈಗ ಎಂ ಎಸ್ ಸರ್ಕಾರ್ ಅವರಿಗೆ ಅಸಾಧ್ಯವಾಗಿದ್ದರೂ ತಮ್ಮನ್ನು ನೋಡಿಕೊಂಡು ತಮ್ಮ ಕ್ಲಿನಿಕ್ ನಡೆಸುತ್ತಿರುವ ತಮ್ಮ 41 ವರ್ಷದ ಮಗನನ್ನು ಕಷ್ಟದಿಂದ ನೆನಪಿಸುತ್ತಾರೆ.

ಪಾಕಿಸ್ತಾನದಲ್ಲಿ ಕಳೆದುಕೊಂಡ ಪ್ರೀತಿಯನ್ನು ಅರಸುತ್ತಾ ಬಹಳ ದೂರ ಪಯಣಿಸಿ ಆ  ಪ್ರೀತಿಯನ್ನು ಬೇರೆ ವಿಧದಲ್ಲಿ ತನಗೆ ಮರಳಿ ನೀಡಿದ ನಗರದಲ್ಲೇ ಅವರು ಈಗಲೂ ವಾಸಿಸುತ್ತಿದ್ದಾರೆ.