ಕಾಳಧನ ನಿಯಂತ್ರಣದಿಂದ ಈಗ ನಗದುರಹಿತ ಅರ್ಥವ್ಯವಸ್ಥೆ ಮಂತ್ರ ಜಪಿಸುತ್ತಿರುವ ಕೇಂದ್ರ

ನೋಟು ಅಮಾನ್ಯ ದೇಶದ ಹಲವೆಡೆ ಗಂಭೀರ ಪರಿಣಾಮ ಬೀರಿದ್ದು ಜನರ ಸಂಕಷ್ಟ ಹೇಳತೀರದಾಗಿದೆ.

ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವುದಾಗಿ ಘೋಷಿಸಿ, ಈ ಕ್ರಮದ ಮೂಲಕ ಸರಕಾರ ಕಾಳಧನವನ್ನು ಹಾಗೂ ನಕಲಿ ನೋಟುಗಳನ್ನು ದೇಶದಿಂದ ಮೂಲೋಚ್ಛಾಟನೆಗೈಯ್ಯುವುದಾಗಿ ಹೇಳಿದ್ದರು. ಆದರೆ ಈ ನಿರ್ಧಾರ ಕೈಗೊಂಡು ಒಂದು ತಿಂಗಳಾಗುತ್ತಲೇ ಸರಕಾರದ ವರಸೆ ಬದಲಾಗಿದೆ. ಇದೀಗ ಸರಕಾರ ಕ್ಯಾಶ್ ಲೆಸ್ ಆರ್ಥಿಕತೆ ಮತ್ತು ಡಿಜಿಟಲ್ ವ್ಯವಹಾರಗಳಿಗೆ ಒತ್ತು ನೀಡಲು ಜನರಿಗೆ ಕರೆ ನೀಡುತ್ತಿದೆ.

ನೋಟು ಅಮಾನ್ಯ ದೇಶದ ಹಲವೆಡೆ ಗಂಭೀರ ಪರಿಣಾಮ ಬೀರಿದ್ದು ಜನರ ಸಂಕಷ್ಟ ಹೇಳತೀರದಾಗಿದೆ. ಮೆಟ್ರೋ ನಗರಗಳಲ್ಲಿಯೂ ಕೂಡ ಹಲವು ಬ್ಯಾಂಕುಗಳು ಹಾಗೂ ಎಟಿಎಂಗಳಲ್ಲಿ ಇರುವ ಹಣ ದಿನದಲ್ಲಿ ಬಹಳ ಬೇಗ ಖಾಲಿಯಾಗುತ್ತಿದೆ. ಬ್ಯಾಂಕು ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ  ಜಗಳಗಳು ಸಾಮಾನ್ಯವಾಗಿ ಬಿಟ್ಟಿವೆ. ಪೆಟ್ರೋಲ್ ಪಂಪುಗಳಲ್ಲಿ ಹಾಗೂ ಇತರ ಸರಕಾರಿ ಸೇವೆಯ ಬಿಲ್ ಪಾವತಿ ಕೇಂದ್ರಗಳಲ್ಲಿ ಅಮಾನ್ಯಗೊಂಡಿರುವ ನೋಟುಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದಂದಿನಿಂದ ಪರಿಸ್ಥಿತಿ ಇನ್ನಷ್ಟು ಜಟಿಲವಾಗಿಬಿಟ್ಟಿದೆ. ಅತ್ತ ಡಿಜಿಟಲ್ ವ್ಯವಹಾರಗಳ ಬಗ್ಗೆ ಭಾರತದ ಹೆಚ್ಚಿನ ಹಳ್ಳಿಗಳ ಜನರಿಗೆ ತಿಳಿದೇ  ಇಲ್ಲ.

ಸೂರತ್ ನಗರದ ವಜ್ರೋದ್ಯಮದಲ್ಲಿ, ಲುಧಿಯಾನದ ಹೊಸೈರಿ ಫ್ಯಾಕ್ಟರಿಗಳಲ್ಲಿ ಹಾಗೂ ಹಲವೆಡೆಯ ಇತರ ಉದ್ಯಮಗಳು ಕಷ್ಟದಲ್ಲಿವೆ. ಸಣ್ಣ ಹಾಗೂ ಮಧ್ಯಮ ಘಟಕಗಳು ತಮ್ಮ ಉದ್ಯೋಗಿಗಳಿಗೆ ವೇತನ ನೀಡಲು ಹೆಣಗಾಡುತ್ತಿವೆ. ಹಲವರನ್ನು ಸದ್ಯದ ಮಟ್ಟಿಗೆ ಕೆಲಸದಿಂದ ತೆಗೆದು ಹಾಕಲಾಗಿದ್ದರೆ ಇನ್ನು ಕೆಲ ಉದ್ಯೋಗಿಗಳ ಅವರಾಗಿಯೇ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ್ದಾರೆ. ಇದ್ದ ಆರ್ಡರುಗಳನ್ನು ಪೂರೈಸಲು ಅಸಾಧ್ಯವಾಗಿದೆ ಹಾಗೂ ಹೊಸ ಆರ್ಡರುಗಳು ಬರುತ್ತಿಲ್ಲ.

ಸಣ್ಣ ಉದ್ಯಮಿಗಳು, ಅವರ ಗ್ರಾಹಕರು ಹಾಗೂ ಅವರಿಗೆ  ವಸ್ತುಗಳನ್ನು ಸರಬರಾಜು ಮಾಡುವವರು  ಇನ್ನೂ ಹೆಚ್ಚಾಗಿ ನಗದು ವ್ಯವಹಾರಗಳನ್ನೇ ಅವಲಂಬಿಸಿದ್ದಾರೆ.

ನಗದು ಕೊರತೆಯಿಂದ ಕಚ್ಚಾ ವಸ್ತುಗಳು, ಆಹಾರ ಹಾಗೂ ಇತರ ಉತ್ಪನ್ನಗಳನ್ನು ಸಾಗಿಸುವ ಟ್ರಕ್ಕುಗಳ ಸಂಚಾರ ಕೂಡ ಬಾಧಿತವಾಗಿದೆ. ತೆರಿಗೆ ಅಧಿಕಾರಿಗಳು ತೆರಿಗೆ ವಂಚಕರನ್ನು ಹಾಗೂ ಅಕ್ರಮ ಹಣ ಹೊಂದಿರುವವರನ್ನು  ಹಿಡಿಯುತ್ತಿದ್ದಾರೆಂಬುದು ಮಾತ್ರ ಒಂದು  ಆಶಾದಾಯಕ ಬೆಳವಣಿಗೆಯಾಗಿದೆ.

ಠೇವಣಿದಾರರಿಗೆ ತಮ್ಮ ಖಾತೆಗಳಿಂದ ವಾರವೊಂದಕ್ಕೆ ರೂ 24,000 ಹಿಂಪಡೆಯಲು ಆರ್ ಬಿ ಐ ಅನುಮತಿಸಿದ್ದರೂ ಹಲವು ಬ್ಯಾಂಕುಗಳು ಈ ನಿರ್ದೇಶನವನ್ನು ಪಾಲಿಸಲು ವಿಫಲವಾಗಿವೆಯೆಂದು ವರದಿಗಳು ತಿಳಿಸುತ್ತವೆ. ಸುಪ್ರೀಂ ಕೋರ್ಟ್ ಕೂಡ ಈ ವಿಚಾರದ ಮೇಲೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ನೋಟು ಅಮಾನ್ಯದ ಪರಿಣಾಮದಿಂದ ದೇಶದ ಆರ್ಥಿಕ ಪ್ರಗತಿ  ಕುಂಠಿತವಾಗಿ  ವಿಶ್ವದಲ್ಲೇ ಅತ್ಯಧಿಕ ವೇಗದಿಂದ ಬೆಳೆಯುತ್ತಿರುವ ಆರ್ಥಿಕತೆ ಎಂಬ  ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತ ಈ ಹೆಗ್ಗಳಿಕೆಯನ್ನು ಕಳೆದುಕೊಳ್ಳಬೇಕಾಗಿ ಬರಬಹುದು.  ವಿತ್ತ ಸಚಿವ ಜೇಟ್ಲಿ ಕೂಡ ಈ ತ್ರೈಮಾಸಿಕ ಹಾಗೂ ಮುಂದಿನ ತ್ರೈಮಾಸಿಕದಲ್ಲಿ ಪ್ರಗತಿ ಕುಂಠಿತಗೊಳ್ಳಬಹುದೆಂದು ಒಪ್ಪುತ್ತಾರೆ.

ನೋಟು ಅಮಾನ್ಯಗೊಂಡಂದಿನಿಂದ ಬ್ಯಾಂಕುಗಳ ಮುಂದೆ ಸರತಿ ನಿಂತು ಬಸವಳಿದ 84 ಮಂದಿ ಸಾವಿಗೀಡಾಗಿದ್ದಾರೆ. ತರುವಾಯ ವಿಪಕ್ಷಗಳು ನೋಟು ರದ್ದತಿಯ ವಿಚಾರದಲ್ಲಿ ಸರಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು ಸಂಸತ್ ಕಲಾಪಗಳು ಕೂಡ ಬಾಧಿತವಾಗಿವೆ.

“ಈ ಯೋಜನೆಯ ಉದ್ದೇಶ ಮತ್ತು ಲಾಭಗಳು, ಅದಕ್ಕಾಗಿ ಮಾಡುವ ವೆಚ್ಚಗಳು ಹಾಗೂ ಈ ಯೋಜನೆಯಿಂದುಂಟಾದ ಸಾವುಗಳನ್ನು ಹೋಲಿಸಿದಾಗ ಈ ಯೋಜನೆ ಜಾರಿ ಸಮರ್ಥನೀಯವೇ ಎಂಬ ಪ್ರಶ್ನೆಗೆ ಸರಕಾರ ಉತ್ತರಿಸಬೇಕಾಗಬಹುದು” ಎಂದು ಆರ್ಥಿಕ ತಜ್ಞರೊಬ್ಬರು ಹೇಳುತ್ತಾರೆ.

ಈ ನೋಟು ಅಮಾನ್ಯ ನಿರ್ಧಾರ ಮತ್ತದರ  ಪರಿಣಾಮಗಳನ್ನು ಅವಲೋಕಿಸಿದಾಗ ಇನ್ನೂ ಹತ್ತು ಹಲವಾರು ಪ್ರಶ್ನೆಗಳು ಏಳಬಹುದು ಎಂದೂ ಅವರು ಹೇಳುತ್ತಾರೆ