ಎಪಿಎಂಸಿ ಸಂತೆಯ ಉಚಿತ ವಾಹನಕ್ಕೆ ಬ್ರೇಕ್

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಕಿಲ್ಲೆ ಮೈದಾನದಲ್ಲಿದ್ದ ವಾರದ ಸಂತೆಯನ್ನು ಎಪಿಎಂಸಿಗೆ ಸ್ಥಳಾಂತರ ಮಾಡಿದ ಬಳಿಕ ಪ್ರತೀ ಸೋಮವಾರ ಎಪಿಎಂಸಿಗೆ ತೆರಳುತ್ತಿದ್ದ ಉಚಿತ ವಾಹನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಕಿಲ್ಲೆ ಮೈದಾನದಲ್ಲಿ ರವಿವಾರದಂದು ಸಂತೆ ನಡೆಸಲು ನಗರಸಭೆ ತೀರ್ಮಾನಿಸಿದ ಕಾರಣ ಸೋಮವಾರ ಎಪಿಎಂಸಿಯಲ್ಲಿ ನಡೆಯುವ ವಾರದ ಸಂತೆಗೆ ಜನ ಬಾರದೇ ಇರುವ ಕಾರಣ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ ಕೃಷ್ಣ ಶೆಟ್ಟಿ ಸಾಮಾನ್ಯ ಸಭೆಯಲ್ಲಿ ತಿಳಿಸಿದರು.

ಎಪಿಎಂಸಿಗೆ ಸಂತೆ ಸ್ಥಳಾಂತರಗೊಂಡ ಬಳಿಕ ಸಂತೆ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಗೊಂದಲ ನಿವಾರಿಸುವ ನಿಟ್ಟಿನಲ್ಲಿ ನಗರಸಭೆ ಕೈಗೊಂಡ ಎಲ್ಲಾ ಕ್ರಮಗಳು ವಿಫಲವಾಗಿದ್ದವು. ಕಿಲ್ಲೆ ಮೈದಾನದಲ್ಲೇ ಸಂತೆ ನಡೆಸಬೇಕೆಂದು ಬಿಜೆಪಿ ಪುರಪಿತೃಗಳು ಹೋರಾಟ ನಡೆಸುತ್ತಲೇ ಬಂದಿದ್ದರು. ಕೊನೆಗೂ ನಗರಸಭೆಯು ರವಿವಾರ ಕಿಲ್ಲೆ ಮೈದಾನದಲ್ಲೇ ಸಂತೆ ನಡೆಸುವುದಾಗಿ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಎಪಿಎಂಸಿಯಲ್ಲಿ ಸೋಮವಾರ ನಡೆಯುವ ಸಂತೆಗೆ ಜನರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ಸೋಮವಾರದಿಂದ ಉಚಿತ ವಾಹನದ ಸೇವೆ ಇಲ್ಲದ ಕಾರಣ ಎಪಿಎಂಸಿಯಲ್ಲಿ ನಡೆಯುವ ಸಂತೆ ಬಂದ್ ಆಗುವ ಸಾಧ್ಯತೆ ಇದೆ.