ಪಾಕಿನೆದುರು ಭಾರತ ಗೆದ್ದರೆ ಸ್ಥಳೀಯರ ಬಟ್ಟೆಗಳಿಗೆ 5 ದಿನ ಉಚಿತ ಇಸ್ತ್ರಿ ಕೊಡುಗೆ

ಇಷ್ಟಕ್ಕೇ ಪಾಕಿಗಳಿಂದ ಬೆದರಿಕೆ !

ಆಗ್ರಾ : ಈಗ ಇಂಗ್ಲೆಂಡಿನಲ್ಲಿ ನಡೆಯುತ್ತಿರುವ ಚಾಂಪಿಯನ್ ಟ್ರೋಫಿ ಕ್ರಿಕೆಟ್ಟಿನಲ್ಲಿ ಭಾರತವು ಪಾಕನ್ನು ಸದೆಬಡಿದರೆ ಮುಂದಿನ ಐದು ದಿನ ಸಾರ್ವಜನಿಕರ ಬಟ್ಟೆಬರೆಗಳಿಗೆ ಉಚಿತ ಇಸ್ತ್ರಿ ಹಾಕಿ ಕೊಡುವೆ ಎಂದು ಉತ್ತರ ಪ್ರದೇಶದ ಕ್ರಿಕೆಟ್ ಅಭಿಮಾನಿ ಹಾಗೂ ಇಸ್ತ್ರಿ ವೃತ್ತಿಯ ಆಜಾದ್ ಸಿಂಗ್ ದಿವಾಕರ್ ವಿಶೇಷ ಆಫರ್ ನೀಡಿದ್ದಾರೆ. ಆದರೆ ಈ ಆಫರಿಂದ ಕೆರಳಿರುವ ಗಡಿಯಿಂದಾಚಿಗಿನ ಅಪರಿಚಿತರು ಆಜಾದಗೆ ಕರೆ ಮಾಡಿ ಬೆದರಿಕೆಯೊಡ್ಡಿದ್ದಾರೆ.

“ಈ ಆಫರ್ ಹಿಂದಿನ ರಹಸ್ಯವೇನು” ಎಂದು ಆಜಾದಗೆ ಫೋನಾಯಿಸಿದವರು ಗದರಿಸುವ ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. “ಏನಿಲ್ಲ, ಇದು ದೇಶ ಪ್ರೇಮ” ಎಂದಷ್ಟೇ ಹೇಳಿ ಕರೆ ಕಟ್ ಮಾಡಿದ್ದೆ” ಎಂದವರು ಹೇಳಿದರು.

ಆದರೆ ಬೆದರಿಕೆ ಕರೆಯಿಂದ ಗಲಿಬಿಗೊಂಡಿರುವ ಆಜಾದ್ ರಕ್ಷಣೆಗೆ ಸ್ಥಳೀಯ ವಿ ಎಚ್ ಪಿ ನಾಯಕ ರಾಜೇಂದ್ರ ಗಾರ್ಗ್ ಮುಂದೆ ಬಂದಿದ್ದಾರೆ. “ಮೊನ್ನೆ ದಿನಪೂರ್ತಿ ಆಜಾದ್ ಜೊತೆ ನಾವಿದ್ದರೂ, ಅಂದು ಯಾವುದೇ ಕರೆ ಬಂದಿಲ್ಲ. ಅವರಿಗೆ ಪೊಲೀಸ್ ರಕ್ಷಣೆ ಕೋರಿದ್ದೇವೆ’ ಎಂದವರು ತಿಳಿಸಿದರು. “ಕಣ್ಗಾವಲು ಪಡೆಗೆ ಫೋನ್ ನಂಬ್ರ ಹಸ್ತಾಂತರಿಸಿದ್ದು, ತನಿಖೆ ನಡೆಯುತ್ತಿದೆ. ಆಜಾದಗೆ ಪೊಲೀಸ್ ಪೇದೆಯೊಬ್ಬರ ನಿಯುಕ್ತಿಗೆ ಸೂಚಿಸಿದ್ದೇವೆ’ ಎಂದು ಜಗದೀಶ್ಪುರ ಪೊಲೀಸ್ ಠಾಣಾಧಿಕಾರಿ ಹೇಳಿದರು. 2011ರಲ್ಲಿ ಟೀಂ ಇಂಡಿಯಾ ವಿಶ್ವ ಕಪ್ ಕ್ರಿಕೆಟ್ ಗೆದ್ದ ಬಳಿಕ ಆಜಾದ್ 15 ದಿನ ಸ್ಥಳೀಯರ ಬಟ್ಟೆಬರೆಗಳಿಗೆ ಉಚಿತ ಇಸ್ತ್ರಿ ಹಾಕಿದ್ದರು.