ಕಾಪು ಸಂತೆ ಮಾರುಕಟ್ಟೆಯಲ್ಲಿ ಉಚಿತ ಕೈ ಬ್ಯಾಗ್ ವಿತರಣೆ

ಪ್ಲಾಸ್ಟಿಕ್ ಮುಕ್ತ ಪಟ್ಟಣಕ್ಕಾಗಿ ಪುರಸಭೆ ದಿಟ್ಟ ಹೆಜ್ಜೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಕಾಪು ಪುರಸಭೆ ವ್ಯಾಪ್ತಿಯನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಮುಂಜಾನೆಯಿಂದಲೇ ಪುರಸಭೆಯ ಅಧ್ಯಕ್ಷೆ ಸೌಮ್ಯಾ ಸಂಜೀವ ಸಹಿತ ಉಪಾಧ್ಯಕ್ಷ ಉಸ್ಮಾನರನ್ನು ಕೂಡಿಕೊಂಡ ಮುಖ್ಯಾಧಿಕಾರಿ ರಾಯಪ್ಪರವರು, ಸಂತೆಗೆ ವ್ಯಾಪಾರಕ್ಕಾಗಿ ಆಗಮಿಸಿದ ವ್ಯಾಪಾರಿಗಳೊಂದಿಗೆ ಪ್ಲಾಸ್ಟಿಕ್ ಚೀಲ ಬಳಸದಂತೆಯೂ, ಅದರ ಸಾಧಕ ಬಾಧಕಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿದ್ದಲ್ಲದೆ ಪ್ಲಾಸ್ಟಿಕ್ ಮುಕ್ತ ಕಾಪುವನ್ನಾಗಿಸುವ ನಮ್ಮ ಹೆಜ್ಜೆಗೆ ನೀವು ಬಲವಾಗ ಬೇಕೆಂಬುದಾಗಿ ಕಿವಿ ಮಾತು ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅಧಿಕಾರಿ, “ಕಳೆದ ಡಿಸೆಂಬರ್ ತಿಂಗಳಿಂದ ಕಾಪುವಿನಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಗೆ ತಂದಿದ್ದು, ಈ ಬಗ್ಗೆ ಕಾಪುವಿನಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ಅಂಗಡಿ ಮುಗ್ಗಟ್ಟುಗಳಿಗೂ ತೆರಳಿ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಲಾಗಿದ್ದರಿಂದ ಪ್ಲಾಸ್ಟಿಕ್ ಬಳಕೆ ನಿಯಂತ್ರಣದಲ್ಲಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಾನಿಗಳಿಂದ ಪಡೆದ ಕೈ ಚೀಲಗಳನ್ನು ವಾರದ ಸಂತೆ ಸಂದರ್ಭ ಹಂಚಲಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ಗುಪ್ತವಾಗಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಕೆಲ ವ್ಯಾಪಾರಿಗಳಿಗೆ ದಂಡ ವಿಧಿಸಲಾಗುತ್ತಿದೆ. ಪೇಟೆಗಳಲ್ಲೂ ಹಾಲಿಗಾಗಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸುತ್ತಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಕಾರ್ಯಚರಿಸಲಿದ್ದೇವೆ. ಮೀನು ಸಾಗಿಸುವುದಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಿ ಮೀನು ಮಾರುಕಟ್ಟೆಯಲ್ಲೂ ಪ್ಲಾಸ್ಟಿಕ್ ನಿಷೇಧಿಸುವ ಬಗ್ಗೆ ಚಿಂತಿಸಲಾಗುವುದು” ಎಂದರು.