ಗಣಿತ ಕಲಿಕೆಗೆ ಉಚಿತ ಆಪ್

ಸಾಂದರ್ಭಿಕ ಚಿತ್ರ

ಮಂಗಳೂರು : ಪ್ರಾಥಮಿಕ ತರಗತಿಗಳ ವಿದ್ಯಾರ್ಥಿಗಳಿಗಾಗಿ ಬೈಜುಸ್ ಸಂಸ್ಥೆ, ಇಟ್ಸ್ ಗೇಮಿಫೈಡ್ ಆಪ್ ಮತ್ತು ಬೈಜುಸ್ ಮ್ಯಾಥ್ ಆಪ್ ಎಂಬ ಉಚಿತ ಆಪುಗಳನ್ನು ಬಿಡುಗಡೆ ಮಾಡಿದೆ.

ಈ ಅಪ್ಲಿಕೇಷನ್, ಗೇಮುಗಳು, ಪರಸ್ಪರ ತೊಡಗಿಕೊಳ್ಳುವಂಥ ವಿಡಿಯೋಗಳು ಹಾಗೂ ರಸಪ್ರಶ್ನೆಗಳ ಮೂಲಕ ಕಿರಿಯ ಮಕ್ಕಳಿಗೆ ಗಣಿತವನ್ನು ಕೂಲಂಕಷವಾಗಿ ಅಧ್ಯಯನ ಮಾಡಲು ಅನುವಾಗುವಂತೆ ವೇದಿಕೆಯನ್ನು ವಿನ್ಯಾಸಗೊಳಿಸಲಾಗಿದೆ. 4ನೇ ಹಾಗೂ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಆಂತರಿಕವಾಗಿ ವಿಚಾರ ಮಾಡಿ, ವಿನ್ಯಾಸಗೊಳಿಸಿ, ನಿರ್ಮಾಣಗೊಂಡಿರುವ ಈ ಆಪ್, ನವೀನ ಹಾಗೂ ಗುಣಮಟ್ಟದ ವಿಡಿಯೋಗಳನ್ನೊಳಗೊಂಡಿದೆ. ಈ ಆಪ್ ಐಒಎಸ್ ಹಾಗೂ ಆಂಡ್ರಾಯ್ಡ್ ಎರಡರಲ್ಲೂ ಲಭ್ಯವಿದೆ.

ದೃಶ್ಯಗಳು ಹಾಗೂ ಸಂದರ್ಭೋಚಿತವಾಗಿ ಸವಿವರವಾದ ಗಣಿತ ಮಾದರಿಯನ್ನು ಕಲಿಸುವ, ಉತ್ತಮ ಶಿಕ್ಷಕರಿಂದ ತಯಾರಾದ ಗೇಮುಗಳು, ವಿಡಂಬನೆಗಳು ಹಾಗೂ ಸಣ್ಣ ಮೋಜುಭರಿತ ದೃಶ್ಯ ತುಣುಕುಗಳನ್ನು ಇದು ಒಳಗೊಂಡಿದೆ. ಈ ವಿನೂತನ ಸಂಯೋಜನೆ, ಗಣಿತ ಕಲಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ಸುಲಭಗೊಳಿಸುವುದರೊಂದಿಗೆ ಇದನ್ನು ನಿಜ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳುವುದು ಹಾಗೂ ಬಳಸುವುದು ಎನ್ನುವುದನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ನೆರವಾಗುತ್ತದೆ ಎಂದು ಬೈಜುಸ್ ಉತ್ಪನ್ನ ಪ್ರಧಾನ ಅಧಿಕಾರಿ ರಂಜಿತ್ ರಾಧಾಕೃಷ್ಣನ್ ಹೇಳಿದ್ದಾರೆ.