ಬಹುಮಾನ ನೀಡುವ ನೆಪದಲ್ಲಿ ಜನರನ್ನು ವಂಚಿಸಿದವಗೆ ನ್ಯಾಯಾಂಗ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ : ಬಹುಮಾನ ಕೊಡುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಣ ಪಡೆದು ಜನರನ್ನು ವಂಚಿಸುತ್ತಿದ್ದ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರದ ಕೆ ಪಿ ವೆಂಕಟಮೂರ್ತಿಗೆ 2 ವಾರಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ರಾಜ್ಯದ ಹಲವೆಡೆ ಕಾರ್ಯಕ್ರಮಗಳಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನಿಸುವ ನೂರಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಲಕ್ಷಾಂತರ ರೂ ಸುಲಿಗೆ ಮಾಡುತ್ತಿದ್ದ ವೆಂಕಟಮೂರ್ತಿಯನ್ನು ಶನಿವಾರ ಹೊನ್ನಾವರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಹೊನ್ನಾವರದ ದೀಪಕ ಪ್ರಭು ಅವರಿಗೆ ಸದಸ್ಯತ್ವದ ನೆಪವೊಡ್ಡಿ 25,000 ರೂ ನೀಡಿದರೆ 25 ಲಕ್ಷ ರೂ ನೀಡುತ್ತೇನೆಂದು ಹೇಳಿ ಮೋಸ, ವಂಚನೆ ಆರೋಪದಡಿ ಈತ ಸಿಲುಕಿಕೊಂಡಿದ್ದ. ವಿಚಾರಣೆ ವೇಳೆ ಈತನಲ್ಲಿ ಹಲವು ಚೆಕ್ ಬೌನ್ಸ್ ಹಾಗೂ ಇತರ ಪ್ರಕರಣಗಳು ಇರುವುದರಿಂದ ಶಂಕಿತ ಆರೋಪಿಯನ್ನು ಪೊಲೀಸರು ಕುಮಟಾ ಪೊಲೀಸ್ ಕಸ್ಟಡಿಗೆ ನೀಡಿದ್ದರು. ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು 2 ವಾರಗಳವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.