`ಬ್ರಾಹ್ಮಣನ ಜತೆ ಮಲಗಿದರೆ ಸರ್ವ ದೋಷ ನಿವಾರಣೆ’

ಯುವತಿಯನ್ನು ಯಾಮಾರಿಸಲು ಯತ್ನಿಸಿದ್ದ ಕಪಟ ಜ್ಯೋತಿಷಿ

ವಿಶೇಷ ವರದಿ

ಮಂಗಳೂರು : ವಿಚಾರವಾದಿ ನರೇಂದ್ರ ನಾಯಕ್ ಇತ್ತೀಚೆಗೆ ಕುಟುಕು ಕಾರ್ಯಾಚರಣೆಯ ಮೂಲಕ ನಗರದ ಜ್ಯೋತಿಷಿಯೊಬ್ಬನ ಬಂಡವಾಳ ಬಯಲುಗೊಳಿಸಿ ಆತನ ಬಂಧನಕ್ಕೆ ಕಾರಣವಾದÀ ನಂತರದ ಬೆಳವಣಿಗೆಯಲ್ಲಿ ಈ ಜ್ಯೋತಿಷಿಯಿಂದ ದೌರ್ಜನ್ಯಕ್ಕೊಳಕ್ಕಾದ 24 ವರ್ಷದ ಯುವತಿಯೊಬ್ಬಳು ಪೊಲೀಸ್ ದೂರು ನೀಡಿದ್ದಾಳೆ. “ಬ್ರಾಹ್ಮಣನೊಬ್ಬನೊಂದಿಗೆ ಮಲಗಿದರೆ ನಿನ್ನ ಎಲ್ಲಾ ದೋಷಗಳೂ ನಿವಾರಣೆಯಾಗುವುದು” ಎಂದು ಆ ಕಪಟ ಜ್ಯೋತಿಷಿ ತನಗೆ ಸಲಹೆ ನೀಡಿದ್ದನೆಂದೂ ಯುವತಿ ಹೇಳಿಕೊಂಡಿದ್ದಾಳೆ.

ಬಿಸಿಎ ಪದವೀಧರೆಯಾಗಿರುವ ಈ ಯುವತಿಯ ಹೆತ್ತವರು ಪ್ರತ್ಯೇಕಗೊಂಡಿದ್ದು, ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದ ಆಕೆಗೆ ಸರಿಯಾದ ಉದ್ಯೋಗವೂ ಸಿಗದೆ ತೊಂದರೆಗೆ ಸಿಲುಕಿದ್ದಳು. ಸ್ಥಳೀಯ ಟೆಲಿವಿಷನ್ ಚಾನೆಲ್ಲುಗಳಲ್ಲಿ ರಾಮಕೃಷ್ಣ ಶರ್ಮ ಎಂಬ ಜ್ಯೋತಿಷಿ ತನ್ನ ಜಾಹೀರಾತುಗಳಲ್ಲಿ ಎಲ್ಲಾ ಸಮಸ್ಯೆಗಳಿಗೂ ತನ್ನಲ್ಲಿ ಪರಿಹಾರವಿದೆಯೆಂದು ಹೇಳಿಕೊಂಡಿರುವುದನ್ನು ನಂಬಿದ ಯುವತಿ ಆತನನ್ನು ಆಗಸ್ಟ್ ತಿಂಗಳಲ್ಲಿ  ಸಂಪರ್ಕಿಸಿದ್ದಳು.

“ನನ್ನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರಕಿಸಿಕೊಡುವುದಾಗಿ ಹೇಳಿದ ಆತ  ವಿವಿಧ ಪೂಜೆಗಳಿಗಾಗಿ ರೂ 15,000 ಪಾವತಿಸುವಂತೆ ಹೇಳಿದ. ನನ್ನಲ್ಲಿ ಅಷ್ಟೊಂದು ಹಣವಿಲ್ಲವೆಂದು ಹೇಳಿದಾಗ ಅರ್ಧ ಮೊತ್ತ ಪಾವತಿಸುವಂತೆ ಹಾಗೂ ಪೂಜೆಯ ಪ್ರಯೋಜನ ದೊರೆತ ಬಳಿಕ ಇನ್ನರ್ಧ ಮೊತ್ತ ಪಾವತಿಸಬಹುದೆಂದು ಹೇಳಿದ. ನಾನು ಆತನಿಗೆ ರೂ 8000 ನೀಡಿದ ಬಳಿಕ ಆತ ಹಲವು ಪ್ರಸಾದಗಳನ್ನು ನೀಡಿ ತಲೆದಿಂಬಿನಡಿ ಇಡುವಂತೆ ಹೇಳಿದೆ. ಆದರೆ ಒಂದೂವರೆ ತಿಂಗಳಾದ ನಂತರವೂ ಸಮಸ್ಯೆಗಳು ಮುಂದುವರಿದಾಗ ಆತನನ್ನು ಮತ್ತೆ ಸಂಪರ್ಕಿಸಿ ನನ್ನ ಹಣ ಹಿಂದಿರುಗಿಸುವಂತೆ ಹೇಳಿದಾಗ ನನ್ನ ತಂದೆ ಕುಟುಂಬದವರು ನನ್ನ ಮೇಲೆ ಮಾಟ ಮಾಡಿಸಿದ್ದಾರೆ. ಸರಿಪಡಿಸಲು ಇನ್ನಷ್ಟು ಹಣ ನೀಡುವಂತೆ ಹೇಳಿದ. ಕೊನೆಗೆ ನಾನು ಬ್ರಾಹ್ಮಣನೊಬ್ಬನೊಂದಿಗೆ ಮಲಗಿದರೆ ಎಲ್ಲಾ ದೋಷಗಳು ಪರಿಹಾರವಾಗುವುದಾಗಿಯೂ ಹೇಳಿದ” ಎಂದು ಆಕೆ ವಿವರಿಸಿದ್ದಾಳೆ.

`ಬಟ್ಟೆ ಮೇಲೆತ್ತಲು ಹೇಳಿದ್ದ’

ಡಿಸೆಂಬರ್ ತಿಂಗಳಲ್ಲಿ ಒಮ್ಮೆ ಆರೋಪಿ ತನಗೆ ಕರೆ ಮಾಡಿ ಕೇರಳದಿಂದ ಬಂದ ತನ್ನ ಗುರೂಜಿ ನಗರಕ್ಕೆ ಬಂದಿರುವುದಾಗಿ ಹಾಗೂ ಸಮಸ್ಯೆಗೆ ಪರಿಹಾರ ನೀಡುವುದಾಗಿ ತಿಳಿಸಿದ್ದನೆಂದು ಯುವತಿ ಹೇಳುತ್ತಾಳೆ. ಅಂತೆಯೇ ಜ್ಯೋತಿಷಿ ಕಚೇರಿಗೆ ಆ ಯುವತಿ ಹೋಗಿ ತನ್ನ ಸಮಸ್ಯೆ ಹೇಳಿಕೊಂಡಾಗ ಕೇರಳದ ಗುರೂಜಿ ಅಳಲಾರಂಭಿಸಿದ್ದನಂತೆ. “ನೀನು ನನ್ನ ಮಗಳಂತೆ ಎಂದು ಹೇಳಿದ ಆತ ಮಡಿಕೆಯಲ್ಲಿ ಕೆಲ ಅಗರ¨ತ್ತಿ ಹೊತ್ತಿಸಿ ನನ್ನ ಬಟ್ಟೆ ಮೇಲೆತ್ತಲು ಹೇಳಿ ನನ್ನ ಹೊಕ್ಕಳಿಗೆ ಸ್ವಲ್ಪ ಭಸ್ಮ ಸಿಂಪಡಿಸುವುದಾಗಿ ಹೇಳಿದ. ನಾನು ವಿರೋಧಿಸಿದಾಗ ಆತನೇ ನನ್ನ ಬಟ್ಟೆ ಮೇಲೆತ್ತಲು ಯತ್ನಿಸಿದ್ದ. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಿಟ್ಟೆ” ಎಂದು ಯುವತಿ ವಿವರಿಸುತ್ತಾಳೆ.

ಜನವರಿ 7ರಂದು ಜ್ಯೋತಿಷಿಯ ಕಚೇರಿಗೆ ಹೋದಾಗ ಅಲ್ಲಿ ಬೀಗ ಹಾಕಲಾಗಿತ್ತು. ಹತ್ತಿರದ ಅಂಗಡಿಯವರ ಸಲಹೆಯಂತೆ ಆಕೆ ನಂತರ ವಿಚಾರವಾದಿ ನರೇಂದ್ರ ನಾಯಕ್ ಅವರನ್ನು ಸಂಪರ್ಕಿಸಿದ್ದಳು.