ಒಂದೇ ಕುಟುಂಬದ ನಾಲ್ವರ ದಾರುಣ ಹತ್ಯೆ, ಪುತ್ರ ಪರಾರಿ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತಿರುವನಂತಪುರ ಜಿಲ್ಲೆಯ ನಂದನಕೋಡ್‍ನ ಕೇರಳ ಮುಖ್ಯಮಂತ್ರಿಯವರ ಕಚೇರಿ ಬಳಿ ಇರುವ ನಿವಾಸದಲ್ಲಿ ನಡೆದಿದೆ.

ನಿವೃತ್ತ ಸರಕಾರಿ ವೈದ್ಯೆ ಡಾ ಜೀನ್ ಪದ್ಮ, ಅವರ ಪತಿ ರಾಜ್ ತಂಕಂ, ಪುತ್ರಿ ಕಾರೋಲಿನೋ ಮತ್ತು ಅಜ್ಜಿ ಲಲಿತಾ ಸಾವನ್ನಪ್ಪಿದ್ದು, ದಂಪತಿ ಪುತ್ರ ಕ್ಯಾಡೆಲ್

ಜೀನ್ಸೆನ್ ರಾಜ್ ಈ ಅಮಾನವೀಯ ಕೊಲೆ ಕೃತ್ಯ ನಡೆಸಿದ್ದು, ಬಳಿಕ ಪರಾರಿಯಾಗಿದ್ದಾನೆ.

ಮೂರು ಶವಗಳು ಸಂಪೂರ್ಣ ಸುಟ್ಟು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಇನ್ನೊಂದು ಮೃತದೇಹ ಬಾತ್ ರೂಂನಲ್ಲಿ ಹರಿತವಾದ ಆಯುಧದಿಂದ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತದೇಹಗಳ ಪಕ್ಕದಲ್ಲಿ ಕೊಡಲಿಯಂತಹ ಆಯುಧಗಳೂ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಶರು ತನಿಖೆ ನಡೆಸುತ್ತಿದ್ದಾರೆ.