ದನ ಕದ್ದು ಮಾಂಸ ಮಾಡಿದ ನಾಲ್ವರು ಆರೋಪಿ ಬಂಧನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಮನೆಯ ಸಮೀಪ ಮೇಯಲೆಂದು ಕಟ್ಟಿಹಾಕಿದ್ದ ಗಬ್ಬದ ದನವೊಂದನ್ನು ಕದ್ದೊಯ್ದು ಕಾಡಿನಲ್ಲೇ ಕೊಂದು ಮಾಂಸ ಮಾಡಿದ ಪ್ರಕರಣವೊಂದು ಹತ್ಯಡ್ಕ ಗ್ರಾಮದಿಂದ ವರದಿಯಾಗಿದೆ.

ಹತ್ಯಡ್ಕ ಗ್ರಾಮದ ಕಾಪಿನಡ್ಕ ಎಂಬಲ್ಲಿ ಮೇಯಲು ಕಟ್ಟಿಹಾಕಲಾಗಿದ್ದ ದನವನ್ನು ಕದ್ದ ಗೋಗಳ್ಳರು ದನವನ್ನು ಹತ್ಯೆಗೈದು ರುಂಡ ಮತ್ತು ನಿರುಪಯುಕ್ತ ದೇಹದ ಅಂಗಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿರುವುದು ಬೆಳಕಿಗೆ ಬಂದಿದೆ.

ಪ್ರಕರಣದಲ್ಲಿ ರೆಖ್ಯ ಗ್ರಾಮದ ಎಂಜಿರ ನಿವಾಸಿಗಳಾದ ರಿಕ್ಷಾ ಚಾಲಕ ಸಂತೋಷ್, ಬಿನೀಷ್, ಬಿನೋಜ್ ಯಾನೆ ಬಿನು, ರಾಜು ಯಾನೆ ರಾಜಪ್ಪ ಎಂಬವರನ್ನು ಬಂಧಿಸಲಾಗಿದೆ. ಬಂಧಿತರಿಂದ ಮಾಂಸ ಮಾಡಲು ಬಳಸಿದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆನಂದ ಗೌಡ ಅವರು ತಮ್ಮ ಮನೆಯ ಪಕ್ಕದಲ್ಲಿ ಮೇಯಲೆಂದು ಕಟ್ಟಿದ್ದ 2 ಜಾನುವಾರುಗಳ ಪೈಕಿ ಒಂದನ್ನು ಹಾಡಹಗಲೇ ಹಗ್ಗ ಬಿಚ್ಚಿ ಕಾಡಿನೊಳಗೆ ಅಪಹರಿಸಿ ಕೃತ್ಯವೆಸಗಿದ್ದಾರೆನ್ನಲಾಗಿದೆ.

ಮನೆಯಾತ ಸ್ಥಳಕ್ಕೆ ಹೋದಾಗ ದನ ಇಲ್ಲದಿರುವುದನ್ನು ಕಂಡು ಸ್ಥಳೀಯರಿಗೆ ವಿಚಾರಿಸಿದ್ದು, ಊರವರು ಸೇರಿ ಸಂಜೆಯ ತನಕ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಮರುದಿನ ಮತ್ತೆ ಕಾಡಿನೊಳಗೆ ಹೋಗಿ ಹುಡುಕಿದಾಗ ದನದ ರುಂಡ ಮತ್ತಿತರ ನಿರುಪಯುಕ್ತ ಭಾಗಗಳು ಪತ್ತೆಯಾಗುವ ಮೂಲಕ ಪ್ರಕರಣ ಬೆಳಕಿಗೆ ಬಂದಿದ್ದು, ಧರ್ಮಸ್ಥಳ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.