ಸಂತೃಪ್ತಿಯ ಸೂತ್ರಗಳು

ಬದುಕು ಬಂಗಾರ – 5

ಶಾಂತಿ, ಸಮಾಧಾನ, ಸಂತೃಪ್ತಿ – ಇವುಗಳಿಲ್ಲದ ಜೀವನ ನರಕ ಸಮಾನ. ಆಧುನಿಕ ಬದುಕಿನ ಜಂಜಾಟದಲ್ಲಿ, ಹೆಚ್ಚೆಚ್ಚು ಸಂಪಾದಿಸುವ ಭರದಲ್ಲಿ ನಾವು ಶಾಂತಿ ಎಂಬ ಪದವನ್ನೇ ಮರೆತುಬಿಡುತ್ತೇವೆ. ಕೊನೆಗೆ ಸುಖವೆಂಬುದು ಮರೀಚಿಕೆಯಾದಾಗ ಶಾಂತಿಯನ್ನು ಅರಸಲು ಪ್ರಯತ್ನಿಸುತ್ತೇವೆ. ಸಂತೃಪ್ತಿಭರಿತ ಹಾಗೂ ಯಶಸ್ಸಿನ ಜೀವನದ ಗುಟ್ಟನ್ನು  ವಿಯೆಟ್ನಾಂ ಬೌದ್ಧ ಗುರು  ತಿಚ್ ನ್ಹ್ ಹನ್ಹ್ ಅವರು ವಿವರಿಸಿದ್ದಾರೆ.

  1. ಇನ್ನೊಬ್ಬರನ್ನು ದೂಷಿಸಬೇಡಿ : ಅವರನ್ನು ಅರ್ಥ ಮಾಡಿಕೊಳ್ಳಿ.
    ನೆಟ್ಟ ಗಿಡವೊಂದು ಚೆನ್ನಾಗಿ ಬೆಳೆಯದೇ ಇದ್ದರೆ ಗಿಡವನ್ನು ದೂರದೆ ನಾವು ಅದಕ್ಕೆ ಹೆಚ್ಚಿನ ಗೊಬ್ಬರ, ನೀರು ಅಥವಾ ಬಿಸಿಲು ದೊರೆಯದೇ ಇರುವುದರಿಂದ ಅದು ಬೆಳೆದಿಲ್ಲ ಎಂದು ಅಂದುಕೊಳ್ಳುತ್ತೇವೆ. ಆದರೆ ಸಂಬಂಧಗಳ ವಿಚಾರ ಬಂದಾಗ ನಮ್ಮ ಸ್ನೇಹಿತರು ಹಾಗೂ ಕುಟುಂಬ ವರ್ಗದವರೊಂದಿಗೆ ನಮಗೇನಾದರೂ  ಭಿನ್ನಾಭಿಪ್ರಾಯ ಮೂಡಿದರೆ ಥಟ್ಟನೆ ಇನೊಬ್ಬರನ್ನು ದೂಷಿಸುತ್ತೇವೆ. ಆದರೆ ಇದರಿಂದ ಏನೂ ಪ್ರಯೋಜನವಾಗದು. ಬದಲಾಗಿ ಅವರನ್ನು ಅರ್ಥೈಸಿಕೊಂಡರೆ ಹಾಗೂ ನಾವು ಅವರನ್ನು ಅರ್ಥೈಸಿಕೊಂಡಿದ್ದೇವೆ ಎಂದು ಅವರಿಗೆ ಮನದಟ್ಟು ಮಾಡಿದರಷ್ಟೇ ಸಾಕು. ಎಲ್ಲವೂ ಬದಲಾಗಿ ಬಿಡುತ್ತದೆ.
  2.  ಎಲ್ಲಾ ಭಾವನೆಗಳನ್ನು ಸ್ವಾಗತಿಸಿ :   ಪ್ರೀತಿ, ಕೋಪ, ಆಕ್ರೋಶ ಹೀಗೆ ಎಲ್ಲಾ ಭಾವನೆಗಳನ್ನೂ ಗುರುತಿಸಬೇಕು ಹಾಗೂ ಸ್ವಾಗತಿಸಬೇಕು, ಎಲ್ಲವೂ ನಮ್ಮದೇ ಆಗಿರುವಾಗ ಬೇಧಭಾವವೇಕೆ ?
  3. ಗತಜೀವನದಿಂದ ಪಾಠ ಕಲಿಯಬಹುದು, ಆದರೆ ವರ್ತಮಾನ ಕಾಲದಲ್ಲಿ ದೃಷ್ಟಿ ನೆಡಿ :  ಗತ ಜೀವನದ ಆಗುಹೋಗುಗಳ ಬಗ್ಗೆ ವ್ಯಥೆ  ಪಡುತ್ತಾ ಕಾಲಹರಣ ಮಾಡುವ ಸಮಯ ಇದಲ್ಲ. ವರ್ತಮಾನದತ್ತ ದೃಷ್ಟಿ ನೆಡಿ.  ಗತ ಜೀವನ ಹಲವು ವಿಧದಲ್ಲಿ ಒಂದು ಪಾಠವಾಗಬಹುದು. ಆದರೆ ವರ್ತಮಾನ ಕಾಲ ಬಹಳ ಮುಖ್ಯ.
  4. ಪ್ರೀತಿಸುವ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಿ : ನೀವು ಪ್ರೀತಿಸುವ ವ್ಯಕ್ತಿಯನ್ನು ಕೇವಲ ನಿಮ್ಮವರನ್ನಾಗಿಸುವ ಮನಸ್ಸು ಮಾತ್ರ ನಿಮ್ಮದಾಗಿದ್ದರೆ ಅದು ತಪ್ಪು. ನೀವು ಮೊದಲಾಗಿ ಅವರನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಬೇಕು ಬೇಡಗಳ ಬಗ್ಗೆ ಮಾತ್ರ ತಿಳಿದುಕೊಂಡು ಇನ್ನೊಬ್ಬರ ಬೇಕು ಬೇಡಗಳತ್ತ ಗಮನ ಹರಿಸದೇ ಇದ್ದಲ್ಲಿ ನಾವು ಇನ್ನೊಬ್ಬರನ್ನು ಪ್ರೀತಿಸಲು ಸಾಧ್ಯವಿಲ್ಲ. ಇನ್ನೊಬ್ಬರನ್ನು ಅರ್ಥ ಮಾಡಿಕೊಂಡಾಗ ಮಾತ್ರ ಪ್ರೀತಿಯ ಆಳ ತಿಳಿಯುತ್ತದೆ.
  5. ನೀವು ನೀವಾಗಿಯೇ ಇದ್ದಾಗ ಸುಂದರ : ನೀವು ನೀವಾಗಿಯೇ ಇರಿ. ಇನ್ನೊಬ್ಬರಿಗಾಗಿ ಸುಂದರವಾಗಿ ಕಾಣಬೇಕೆಂದು ಬಯಸಬೇಡಿ. ಮೊದಲು ನೀವು ನಿಮ್ಮನ್ನು ಸ್ವೀಕರಿಸಬೇಕು. ನೀವು ತಾವರೆಯಾಗಿದ್ದರೆ, ತಾವರೆಯಾಗಿಯೇ ಇರಲು ಬಯಸಿ, ಬೇರೆ ಹೂವಾಗಲು ಯತ್ನಿಸಬೇಡಿ.
  6. ಕಷ್ಟಗಳಿಗೆ ಅಂಜಬೇಡಿ : ಕಷ್ಟಗಳು ಬಂದಾಗ ದೂರ ಓಡಬೇಡಿ ಅಥವಾ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಡಿ. ಈ ಜಗತ್ತಿನಲ್ಲಿ ಎಲ್ಲರಿಗೂ ಕಷ್ಟಗಳಿವೆ ಎಂಬುದನ್ನು ಅರಿತುಕೊಳ್ಳಿ. ಕಷ್ಟದಲ್ಲಿರುವ ನಿಮ್ಮ ಆಪ್ತರಿಗೆ ಸಾಂತ್ವನ ಹೇಳಿ.