ಮಾಜಿ ಗರ್ಲ್ ಫ್ರೆಂಡ್ ಪ್ರೇಮ ಪತ್ರ ಕಳಿಸಿದ್ದಾಳೆ

 

ಪ್ರ : ನನಗೀಗ 26 ವರ್ಷ. ಟೆಂಪರರಿ ಕೆಲಸದಲ್ಲಿ ಇದ್ದೇನೆ. ನನಗೊಬ್ಬಳು ಗರ್ಲ್‍ಫ್ರೆಂಡ್ ಇದ್ದಳು. ಕೆಲವು ಕಾರಣಗಳಿಂದ ಕಳೆದ ವರ್ಷ ಅವಳಿಂದ ಬ್ರೇಕಪ್ ಮಾಡಿಕೊಂಡಿದ್ದೇನೆ. ಅವಳಿಗೆ ಮದುವೆ ಗೊತ್ತಾಗಿದೆ, ಬರುವ ತಿಂಗಳೇ ಮದುವೆ ಅಂತ ನನ್ನ ಸ್ನೇಹಿತರ ಮೂಲಕ ತಿಳಿಯಿತು. ನನಗೆ ಇನ್ನೂ ಸರಿಯಾದ ಕೆಲಸವೂ ಸಿಕ್ಕದ ಕಾರಣ ನಾನಂತೂ ಈಗ ಮದುವೆಗೆ ತಯಾರಿರಲಿಲ್ಲ. ಅವಳಾದರೂ ಈಗ ಮದುವೆಯಾಗಿ ಸೆಟ್ಲ್ ಆಗುತ್ತಿದ್ದಾಳಲ್ಲ ಅಂತ ಸಮಾಧಾನ ಪಟ್ಟುಕೊಂಡಿದ್ದೆ. ಆದರೆ ನನಗೆ ಆಶ್ಚರ್ಯವಾಗಿದ್ದೆಂದರೆ ಕಳೆದ ವಾರ ಅವಳು ನನಗೊಂದು ಪ್ರೇಮಪತ್ರ ಕೊರಿಯರ್ ಮಾಡಿದ್ದಳು. ಅವಳಿನ್ನೂ ನನ್ನ ಮರೆತಿಲ್ಲವಂತೆ. ಈಗ ಅವಳ ಪಾಲಕರು ಅವಳಿಗೆ ಬೇರೆ ಮದುವೆ ಮಾಡುತ್ತಿದ್ದಾರೆ ಅಂತ ತನ್ನ ಮನಸ್ಸಿನ ಭಾವನೆಯನ್ನೆಲ್ಲ ತೋಡಿಕೊಂಡಿದ್ದಾಳೆ. ನಾನೀಗ ಅವಳನ್ನು ಪುನಃ ಪ್ರೀತಿಸುವ ಸ್ಥಿತಿಯಲ್ಲಂತೂ ಇಲ್ಲ, ನನ್ನ ಜೀವನವೇ ಈಗ ಗೊಂದಲಮಯವಾಗಿದೆ. ಅವಳು ಒಂದು ವರ್ಷದಿಂದ ನನ್ನ ಸಂಪರ್ಕದಲ್ಲಿಯೂ ಇದ್ದಿರಲಿಲ್ಲ. ನನ್ನ ಮೊಬೈಲ್ ನಂಬರ್ ಅವಳಲ್ಲಿದ್ದರೂ ಅವಳು ಮಾತೂ ಆಡಿರಲಿಲ್ಲ. ಈಗ ಅಚಾನಕ್ ಆಗಿ ಈ ಪತ್ರ ಬಂದಿದೆ. ನಾನು ಅವಳಿಗೆ ಉತ್ತರಿಸಬೇಕಾ?

: ಆ ಪತ್ರವನ್ನು ನಿರ್ಲಕ್ಷಿಸುವುದೇ ಒಳ್ಳೆಯದು ಅಂತ ನನಗನಿಸುತ್ತದೆ. ಯಾವುದೋ ದುರ್ಬಲಘಳಿಗೆಯಲ್ಲಿ ಅವಳು ನಿಮಗೆ ಆ ಪತ್ರ ಬರೆದಿರಬಹುದು. ನೀವಿಬ್ಬರೂ ನಿಮ್ಮ ರಿಲೇಶನ್‍ಶಿಪ್ಪನ್ನು ಈಗಾಗಲೇ ಬ್ರೇಕಪ್ ಮಾಡಿಕೊಂಡು ಒಂದು ವರ್ಷವಾಯಿತು. ಅವಳಿಗೆ ನಿಮ್ಮಿಂದ ದೂರ ಇರಲು ಸಾಧ್ಯವೇ ಇಲ್ಲದಿದ್ದರೆ ಇಷ್ಟು ದಿನ ನಿಮ್ಮಿಂದ ದೂರ ಇರುತ್ತಿರಲಿಲ್ಲ. ಹೇಗಾದರೂ ಮಾಡಿ ನಿಮ್ಮ ಸಂಪರ್ಕ ಸಾಧಿಸುತ್ತಿದ್ದಳು. ಅವಳು ನಿಮ್ಮಿಂದ ದೂರ ಹೋಗಲೇ ಬಯಸಿದ್ದಳು. ಆದರೆ ಈಗ ಮದುವೆ ಗೊತ್ತಾದಾಗ ಹಿಂದಿನದ್ದೆಲ್ಲ ನೆನಪಾಗಿ ಸ್ವಲ್ಪ ಮನಸ್ಸು ಚಂಚಲವಾಗಿರಬಹುದು. ನೀವೀಗ ಅವಳಿಗೆ ಉತ್ತರಿಸಿದರೆ ಅಥವಾ ಕಾಲ್ ಮಾಡಿದರೆ ಮತ್ತಷ್ಟು ಅವಳ ಮನಸ್ಸು ಏರುಪೇರಾಗಬಹುದು. ನೀವಂತೂ ಅವಳನ್ನು ಪ್ರೀತಿಸುವ ಮತ್ತು ಮದುವೆಯಾಗುವ ಸ್ಥಿತಿಯಲ್ಲಿ ಈಗ ಇಲ್ಲ ಅಂದಮೇಲೆ ನೀವೀಗ ಮಧ್ಯಪ್ರವೇಶಿಸಿದರೆ ಅದರಿಂದ ಲಾಭವಾಗುವ ಬದಲು ಮತ್ತಷ್ಟು ಗೊಂದಲಮಯವಾಗಬಹುದು. ನೀವು ಅವಳ ಪತ್ರಕ್ಕೆ ಪ್ರತಿಕ್ರಿಯೆಯೇ ಕೊಡದಿದ್ದರೆ ನೀವೀಗಾಗಲೇ ಅವಳನ್ನು ಮರೆತು ಮುಂದೆ ಹೋಗಿಯಾಗಿದೆ ಅಂತ ಭಾವಿಸಿಯಾದರೂ ಅವಳ ಹೆತ್ತವರ ಇಚ್ಛೆಯಂತೆ ಮದುವೆಯಾಗಬಹುದು. ಅದೂ ಅಲ್ಲದೇ ಅವಳಿಗೆ ನಿಶ್ಚಯವಾದ ಹುಡುಗ ಅವಳಿಗಿಷ್ಟವಿಲ್ಲದಿದ್ದರೆ ಅವಳಾಗಿಯೇ ಹೊರಬರಬೇಕು. ನಿಮ್ಮ ಮಧ್ಯಪ್ರವೇಶ ಈ ಸಮಯದಲ್ಲಿ ಬೇಡವೆಂದೇ ನನಗನಿಸುತ್ತದೆ.