`ಜಾತಿ ವಿನಾಶದ ಯೋಚನೆಯೇ ಬೇಡ’

ಮಂಗಳೂರು : “ಮೇಲ್ಜಾತಿ ಯವರಿಗೆ ಕೆಳಜಾತಿಯವರು ಬಂಡವಾಳ ಆಗಿರುವುದರಿಂದ ಅವರು ಜಾತಿವಿನಾಶವನ್ನು ತಿರಸ್ಕರಿಸುತ್ತಾರೆ. ನಮ್ಮ ತಳಸಮುದಾಯಗಳು ಅವರನ್ನು ಧಿಕ್ಕರಿಸುವ ನಿರ್ಧಾರ ಮಾಡಬೇಕು. ಮಾತ್ರವಲ್ಲದೆ, ಜಾತಿ ವಿನಾಶ ಮಾಡಬೇಕೆಂಬ ಕಲ್ಪನೆಯನ್ನೇ ತಿರಸ್ಕರಿಸಬೇಕು” ಎಂದು ಸಿ ಜಿ ಲಕ್ಷ್ಮೀಪತಿ ಹೇಳಿದರು. ಅವರು ನಗರದಲ್ಲಿ ನಡೆದ ಜನನುಡಿಯ ಸಮಾನತೆಯ ಆಶಯ ಮತ್ತು ಮೀಸಲಾತಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

“ಜಾತಿ ನಿರ್ಮೂಲನೆಯಾಗಬೇಕು ಅನ್ನುವುದು ಎಲ್ಲರ ಆಶಯವಾಗಿದೆ. ಆದರೆ ಅದು ಸಾಧ್ಯವಾಗುವುದಿಲ್ಲ ಅನ್ನುವುದು ವಾಸ್ತವ. ಇಂದು ಜಾತಿ ವಿನಾಶ ಮತ್ತು ಮೀಸಲಾತಿಯನ್ನೇ ಮತ್ತೆ ಮತ್ತೆ  ಚರ್ಚಿಸುವ ಬದಲು ಆತ್ಮಗೌರವ ಮತ್ತು ಘನತೆಯಿಂದ ನಡೆಯುವ ಮಾದರಿಯನ್ನು ರೂಪಿಸಿಕೊಳ್ಳುವ ಅಗತ್ಯವಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ನೋಡಿದರೆ ಅದು ಮೀಸಲಾತಿಗೆ, ದಲಿತರಿಗೆ ನೀಡುತ್ತಿರುವುದು ಏನೇನೂ ಅಲ್ಲ. ಮೇಲ್ಜಾತಿಯವರು ಕೀಳುಜಾತಿಯವರನ್ನು ಬೌದ್ಧಿಕ ದಾಸ್ಯಕ್ಕೆ ಒಳಪಡಿಸಿದ್ದು, ಸತತವಾಗಿ ಮಾನಸಿಕವಾಗಿ ಭಯೋತ್ಪಾದನೆಯನ್ನು ನಿರಂತರವಾಗಿ ನಡೆಸುತ್ತ ಬಂದಿದ್ದಾರೆ” ಎಂದವರು ಹೇಳಿದರು. “ಇತ್ತೀಚೆಗೆ ಕೇಂದ್ರ ಸರ್ಕಾರ ನೋಟುಗಳ ಅಮಾನ್ಯೀಕರಣ ಮಾಡಿದಾಗಲೂ ಕೂಡ ಹೆಚ್ಚು ಸಂಕಷ್ಟ ಅನುಭವಿಸಿದ್ದು ಕೆಳ ಸಮುದಾಯಗಳೇ ಆಗಿದ್ದು, ದಲಿತರು ಹೆಚ್ಚಿರುವ ಪ್ರದೇಶಗಳ ಎಟಿಎಂಗಳಲ್ಲಿ ಹಣವನ್ನೇ ಹಾಕಿರಲಿಲ್ಲ. ಮುಸ್ಲಿಮರ ಪ್ರದೇಶದಲ್ಲಿ ಹಣ ಹಾಕಿಲ್ಲ ಎಂದು ಹೈದರಾಬಾದಿನ  ಓವೈಸಿ ಟೀಕಿಸಿದರು. ಇದರಲ್ಲಿ ವಾಸ್ತವ ಇದೆ” ಎಂದವರು ಹೇಳಿದರು.