ಎತ್ತಿನಹೊಳೆ : ಮರಗಳ ಮಾರಣಹೋಮದ ಬಗ್ಗೆ ಫಾರೆಸ್ಟ್ ಸರ್ವೇ ಆಫ್ ಇಂಡಿಯಾ ಪರಿಶೀಲನೆ

ಹಾಸನ : ಎತ್ತಿನಹೊಳೆ ಯೋಜನೆಗಾಗಿ ಕಡಿದುರುಳಿಸಲಾದ  ಮರಗಳ ಸಂಖ್ಯೆಯ ಬಗ್ಗೆ ಪರಿಶೀಲಿಸುವ ಕಾರ್ಯವನ್ನು ಕೇಂದ್ರದ ಪರಿಸರ ಹಾಗೂ ಅರಣ್ಯ ಸಚಿವಾಲಯವು ಇದೀಗ ಡೆಹ್ರಾಡೂನಿನಲ್ಲಿರುವ ಫಾರೆಸ್ಟ್ ಸರ್ವೇ ಆಫ್ ಇಂಡಿಯಾಗೆ ವಹಿಸಿದೆ. ಸಚಿವಾಲಯ ಈ ಹಿಂದೆ ಸ್ಥಳ ಪರಿಶೀಲನೆ ನಡೆಸಿದ ಹೊರತಾಗಿಯೂ  ಯೋಜನೆಗೆ ಕಡಿಯಲಾದ ಮರಗಳ ಬಗ್ಗೆ  ಸ್ಪಷ್ಟ ಚಿತ್ರಣ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಸಕಲೇಶಪುರದಲ್ಲಿರುವ ಎತ್ತಿನಹೊಳೆ ಪ್ರದೇಶದಲ್ಲಿ ಯೋಜನೆ ಆರಂಭವಾಗುವ ಮುನ್ನ, 2015ರಲ್ಲಿ ಹಾಗೂ ನಂತರ 2016ರಲ್ಲಿದ್ದ ಮರಗಳ ಬಗ್ಗೆ ಹೈ ರೆಸೊಲ್ಯೂಶನ್ ಚಿತ್ರಗಳನ್ನು ತನಗೆ ನೀಡಬೇಕೆಂದೂ ಸಚಿವಾಲಯ ಫಾರೆಸ್ಟ್ ಸರ್ವೇ ಆಫ್ ಇಂಡಿಯಾಗೆ ಹೇಳಿದೆಯಲ್ಲದೆ ಈ ಮೂಲಕ ಪ್ರಸಕ್ತ ಯೋಜನಾ ಪ್ರದೇಶದ ಪರಿಸ್ಥಿತಿಯನ್ನು ಅವಲೋಕಿಸಲು ಸಹಕಾರಿಯಾಗಲಿದೆ ಎಂದಿದೆÉ. ತಾವು ಈ ಬಗ್ಗೆ ಸಂಸ್ಥೆಗೆ ಜನವರಿ 6ರಂದು ಪತ್ರ ಬರೆದಿರುವುದಾಗಿ ಸಚಿವಾಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅರವಿಂದ ಕನ್ಪಾಡೆ ಹೇಳಿದ್ದಾರೆ.

ಎತ್ತಿನಹೊಳೆ ಯೋಜನೆಯ ಕೆಲಸ ಕೈಗೊಳ್ಳಲು ಅಗತ್ಯಕ್ಕಿಂತ ಹೆಚ್ಚು ಮರಗಳನ್ನು ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಡಿಯಲಾಗಿದೆ ಎಂದು  ದೂರುದಾರ ಕೆ ಎನ್ ಸೋಮಶೇಖರ್ ತಮ್ಮ ಅರ್ಜಿಯಲ್ಲಿ ಹೇಳಿದ ಹಿನ್ನೆಲೆಯಲ್ಲಿ ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ ಆದೇಶದಂತೆ ಪರಿಸರ ಸಚಿವಾಲಯ ಈ ಹಿಂದೆ ಸ್ಥಳ ಪರಿಶೀಲನೆ ಕೈಗೊಂಡಿತ್ತು.