ಮರಳು ಟಿಪ್ಪರ್ ತಡೆಹಾಕಿ ಅನ್ಲೋಡ್ ಮಾಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ನಮ್ಮ ಪ್ರತಿನಿಧಿ ವರದಿ

ಉಡುಪಿ: ತಮ್ಮ ವ್ಯಾಪ್ತಿಗೆ ಬಾರದಿದ್ದರೂ, ನಗರದ ಹೊರವಲಯದ ಆದಿಉಡುಪಿಯಲ್ಲಿರುವ ಉಡುಪಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕಚೇರಿಯ ಉಪಅರಣ್ಯಧಿಕಾರಿ, ವಾಹನ ಚಾಲಕ ಹಾಗೂ ಇಬ್ಬರು ಅರಣ್ಯ ರಕ್ಷಕರು ಸಹಿತ ನಾಲ್ಕು ಮಂದಿಯ ತಂಡವೊಂದು ಬುಧವಾರ ತಡರಾತ್ರಿ ಮಂಗಳೂರಿನಿಂದ ಉಡುಪಿ ಕಡೆಗೆ ಬರುತ್ತಿದ್ದ ಮರಳು ತುಂಬಿದ ಟಿಪ್ಪರನ್ನು ಅಡ್ಡಹಾಕಿ, ಬ್ರಹ್ಮಾವರ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಟಿಪ್ಪರಿನಲ್ಲಿದ್ದ ಮರಳನ್ನು ಅನ್ಲೋಡ್ ಮಾಡಿಸಿ ಟಿಪ್ಪರಗಳನ್ನು ಬಿಟ್ಟುಬಿಟ್ಟು ಹೋಗಿದ್ದಾರೆ ಎಂದು ದೂರಲಾಗಿದೆ.

ಅರಣ್ಯ ಇಲಾಖೆಗೆ ಮರಳು ತುಂಬಿದ ಟಿಪ್ಪರಗಳನ್ನು ವಶಪಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ, ನಗರದ ಹೊರವಲಯದ ಆದಿಉಡುಪಿಯಲ್ಲಿರುವ ಉಡುಪಿ ಪ್ರಾದೇಶಿಕ ವಲಯ ಕಚೇರಿಯ ಉಪಅರಣ್ಯಧಿಕಾರಿ ದಯಾನಂದ, ಅರಣ್ಯ ರಕ್ಷಕರಾದ ದೇವು ಯಾನೆ ದೇವರಾಜ ಪಾಣಾರ, ಗಣಪತಿ ನಾಯ್ಕ ಹಾಗೂ ಜೀಪು ಚಾಲಕ ಜಾಯ್ ಎಂಬವರು ಸೇರಿಕೊಂಡು ಬುಧವಾರ ತಡರಾತ್ರಿ ಪಡುಬಿದ್ರಿ ಪೇಟೆ ಬಳಿ ಮಂಗಳೂರಿನಿಂದ ಉಡುಪಿ ಕಡೆಗೆ ಮರಳನ್ನು ಹೇರಿಕೊಂಡು ಬರುತ್ತಿದ್ದ ಐದು ಟಿಪ್ಪರಗಳನ್ನು ಅಡ್ಡಹಾಕಿದ್ದಾರೆ. ಐದು ಟಿಪ್ಪರುಗಳನ್ನು ಬ್ರಹ್ಮಾವರ ಠಾಣಾ ವ್ಯಾಪ್ತಿ ಕಡೆಗೆ ಕರೆದುಕೊಂಡು ಬಂದ ಅರಣ್ಯಧಿಕಾರಿಗಳು, ಟಿಪ್ಪರ್‍ನಲ್ಲಿದ್ದ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಮರಳನ್ನು ಬ್ರಹ್ಮಾವರ ಸಮೀಪದ ಹಾರಾಡಿ ಗ್ರಾಮದ ದೂಪದಕಟ್ಟೆಯ ನರ್ಸರಿ ಬಳಿಯ ನಿರ್ಜನ ಕಾಡಿನಲ್ಲಿ ಅನ್ಲೋಡ್ ಮಾಡಿ ಟಿಪ್ಪರಗಳನ್ನು ಬಿಟ್ಟುಬಿಟ್ಟಿದ್ದಾರೆ.

ಮರಳು ಅನ್‍ಲೋಡ್ ಮಾಡಿದ ವ್ಯಾಪ್ತಿಯ ಬ್ರಹ್ಮಾವರ ವಯಲದ ಅರಣ್ಯ ರಕ್ಷಕ ಜೀವನ್‍ದಾಸ್ ಶೆಟ್ಟಿಗೆ ಸೇರಿದೆ ಎಂದು ತಿಳಿದು ಬಂದಿದೆ. ಅರಣ್ಯ ಇಲಾಖೆಯವರಿಗೆ ಮರಳು ಸಾಗಾಟ ವಾಹನಗಳನ್ನು ತಡೆಯುವ ಅವಕಾಶ ಇಲ್ಲದಿದ್ದರೂ, ವಶಪಡಿಸಿಕೊಂಡ ಮರಳು ಸಾಗಾಟ ಟಿಪ್ಪರ್ ಹಾಗೂ ಮರಳನ್ನು ಬ್ರಹ್ಮಾವರ ಠಾಣೆಗಾಗಲೀ, ಉಡುಪಿ ಉಪತಹಶೀಲ್ದಾರ್‍ಗಾಗಲೀ ಇಲ್ಲವೇ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಗಾಗಲೀ ಹಸ್ತಾಂತರಿಸದೇ ಅಕ್ರಮ ಎಸಗಿದ್ದಾರೆ ಎಂಬ ಗಂಭೀರ ಆರೋಪ ನಾಗರಿಕರಿಂದ ಕೇಳಿಬಂದಿದೆ. ಈ ಬಗ್ಗೆ ಉಡುಪಿ ಎಸ್ ಪಿ, ಡೀಸಿ ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ತನಿಖೆ ನಡೆಸಿ, ತಪ್ಪಿತಸ್ಥ ಅರಣ್ಯಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂಬ ಆಗ್ರಹ ನಾಗರಿಕರಿಂದ ಕೇಳಿ ಬಂದಿದೆ.