ನಿಯಂತ್ರಣಕ್ಕೆ ಬಾರದ ಕಾಡ್ಗಿಚ್ಚು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಪೈವಳಿಕೆ ಸಮೀಪದ ಕಾಯರ್ಕಟ್ಟೆ ಎಂಬಲ್ಲಿ ಕಳೆದ ಮೂರು ದಿನಗಳಿಂದ ವ್ಯಾಪಕ ಪ್ರಮಾಣದ ಕಾಡ್ಗಿಚ್ಚು ಕಂಡುಬಂದಿದ್ದು, ಶಮನಗೊಳಿಸಲಾಗದೆ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಜನವಸತಿ ರಹಿತವಾದ ಮುಳಿಗುಡ್ಡೆಗಳಿಂದಾವೃತವಾದ ಪ್ರದೇಶದಲ್ಲಿ ಮೂರು ದಿನಗಳಿಂದ ಕಾಡ್ಗಿಚ್ಚು ವ್ಯಾಪಿಸಿದ್ದು ಎಕ್ರೆಗಟ್ಟಲೆ ಪ್ರದೇಶ ಆಹುತಿಯಾಗಿದೆ. ಈ ಪ್ರದೇಶ ಸನಿಹದಲ್ಲೇ ವಾಸಿಸುತ್ತಿರುವ ಹತ್ತು ಕುಟುಂಬಗಳು ಆತಂಕದಲ್ಲಿವೆ.

ಸ್ಥಳಿಯರು ನಿರಂತರ ಉಪಶಮನಕ್ಕೆ ಪ್ರಯತ್ನಿಸಿದರೂ ನಿಯಂತ್ರಣಕ್ಕೊಳಪಡುತ್ತಿಲ್ಲ. ಜೊತೆಗೆ ಈ ಪ್ರದೇಶಕ್ಕೆ ರಸ್ತೆ ಸೌಕರ್ಯವಿಲ್ಲದಿರುವುದರಿಂದ ಅಗ್ನಿ ಶಾಮಕ ವಾಹನ ತೆರಳಲು ಅಡಚಣೆಯಾಗಿದೆ. ಇದೀಗ ಜೆಸಿಬಿ ಬಳಸಿ ರಸ್ತೆ ನಿರ್ಮಾಣ ಆರಂಭಿಸಲಾಗಿದೆ. ಬೆಂಕಿ ಹಬ್ಬಲು ಕಾರಣಗಳು ತಿಳಿದುಬಂದಿಲ್ಲ.