ಚಿನ್ನಾಭರಣ, ನಗದು ಕಳವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಯಲ್ಲಾಪುರ : ಪಟ್ಟಣದ ಗುಡಿಗಾರಗಲ್ಲಿಯಲ್ಲಿ ಸೋಮವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಬಾಗಿಲು ಮುರಿದು ಮನೆಯನ್ನು ಪ್ರವೇಶಿಸಿದ ಕಳ್ಳರು ಮನೆಯಲ್ಲಿದ್ದ ಸುಮಾರು 3.72 ಲಕ್ಷ ಮೌಲ್ಯದ ಬಂಗಾರದ ಒಡವೆ ಹಾಗೂ ನಗದನ್ನು ಕದ್ದೊಯ್ದಿದ್ದಾರೆ.

ಪಟ್ಟಣದ ಗುಡಿಗಾರಗಲ್ಲಿಯ ಸುನಿತಾ ಉದಯ ದೇಸಾಯಿ ಎಂಬವರಿಗೆ ಈ ಒಡವೆ ಸೇರಿದ್ದಾಗಿದ್ದು, ಇವರು ಮಧ್ಯಾಹ್ನ ವೇಳೆ ಸುಮಾರು 1 ಗಂಟೆಗೆ ಮನೆಗೆ ಬೀಗ ಹಾಕಿ ಹೊರಗಡೆ ಹೋದವರು ಕೆಲಸ ಮುಗಿಸಿ ಒಂದೂ ಮುಕ್ಕಾಲು ಗಂಟೆಯ ವೇಳೆಗೆ ಮನೆಗೆ ವಾಪಸ್ಸಾಗುವಷ್ಟರಲ್ಲಿ ಈ ಕಳ್ಳತನ ನಡೆದಿದೆ. ಮನೆಯ ಹಿಂಭಾಗದ ಬಾಗಿಲಿನ ಚಿಲಕ ಮುರಿದು, ಮನೆಯಲ್ಲಿದ್ದ ಕಪಾಟಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ.

ಸುಮಾರು 15 ಗ್ರಾಂ ತೂಕದ ನೆಕ್ಲೇಸ್, 1.40 ಗ್ರಾಂ ತೂಕದ ಮಂಗಳಸೂತ್ರ, 1.25 ಗ್ರಾಂ ತೂಕದ 5 ಉಂಗುರ, 20 ಗ್ರಾಂ ತೂಕದ 3 ಚೈನ್, 20 ಗ್ರಾಂ ತೂಕದ 2 ಬಳೆ, 15 ಗ್ರಾಂ ತೂಕದ 3 ಜೊತೆ ಕಿವಿಯೋಲೆ ಹಾಗೂ 400 ರೂ ನಗದನ್ನು ಕಳ್ಳರು ಕದ್ದೊಯ್ದಿದ್ದಾರೆ. ಸಿಪಿಐ ವಿಜಯ್ ಬಿರಾದಾರ್ ಹಾಗೂ ಪಿ ಎಸ್ ಐ ಶ್ರೀಧರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಕಳ್ಳರ ಜಾಡನ್ನು ಹಿಡಿಯಲು ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.