ಅರಣ್ಯ ಇಲಾಖೆಗೆ ಟ್ರೀ ಪಾರ್ಕ್ ನಿರ್ವಹಣಾ ವೆಚ್ಚದ್ದೇ ಚಿಂತೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಳೆದ ವರ್ಷದ ಮೇ ತಿಂಗಳಲ್ಲಿ ಅದ್ದೂರಿಯಿಂದ ಉದ್ಘಾಟನೆಗೊಂಡ ತಣ್ಣೀರುಬಾವಿಯ ಟ್ರೀ ಪಾರ್ಕ್ ಸರಕಾರದ ವಿಫಲ ಯೋಜನೆಗಳ ಪಟ್ಟಿಯಲ್ಲಿ ಇನ್ನೊಂದು ಯೋಜನೆಯಾಗಿ ಸೇರಲಿದೆಯೇ ಎಂಬ ಸಂದೇಹ ಈಗಾಗಲೇ ಮೂಡಲಾರಂಭಿಸಿದೆ.

ಸುಮಾರು ರೂ 2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಟ್ರೀ ಪಾರ್ಕ್ ಮಂಗಳೂರು ಅರಣ್ಯ ವಿಭಾಗದಲ್ಲಿರುವ ಏಕೈಕ ಇಂತಹ ಪಾರ್ಕ್ ಆಗಿದೆ. ಈ ಪಾರ್ಕ್ ನಿರ್ವಹಣೆಗಾಗಿ ಇಲಾಖೆಗೆ ವಾರ್ಷಿಕ ರೂ 10 ಲಕ್ಷದ ಅಗತ್ಯವಿದೆ. ಆದರೆ ನಿಯಮದ ಪ್ರಕಾರ ಸರಕಾರ ನಿರ್ವಹಣಾ ವೆಚ್ಚವನ್ನು ಪ್ರಥಮ ಮೂರು ವರ್ಷ ಮಾತ್ರ ನೀಡಲಿದ್ದು, ನಂತರದ ವರ್ಷಗಳಲ್ಲಿ ಇಲಾಖೆಯೇ ಈ ವೆಚ್ಚವನ್ನು ಭರಿಸಬೇಕಿದೆ.

“ಪ್ರವೇಶ ಶುಲ್ಕ ಸಂಗ್ರಹ ಹಾಗೂ ಸಣ್ಣ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ನೀಡುವ ಮೂಲಕ ನಾವು ಸಣ್ಣ ಮಟ್ಟಿನ ಆದಾಯ ನಿರೀಕ್ಷಿಸಬಹುದು. ಆದರೆ ಇದರಿಂದ ವಾರ್ಷಿಕ ರೂ 5 ಲಕ್ಷಕ್ಕಿಂತ ಹೆಚ್ಚು ಸಂಗ್ರಹವಾಗದು” ಎಂದು ವಿಭಾಗೀಯ ಅರಣ್ಯಾಧಿಕಾರಿ ವಿ ಕರಿಕಲನ್ ಹೇಳುತ್ತಾರೆ. ಪ್ರಸಕ್ತ ಮಕ್ಕಳಿಗೆ ಮತ್ತು ವಯಸ್ಕರಿಂದ ಪ್ರವೇಶ ಶುಲ್ಕವಾಗಿ ಇಲಾಖೆ ಕ್ರಮವಾಗಿ ರೂ 5 ಹಾಗೂ ರೂ 10 ಸಂಗ್ರಹಿಸುತ್ತದೆ. ಉದ್ಘಾಟನೆಗೊಂಡಂದಿನಿಂದ ಇಲ್ಲಿಯ ತನಕ ಈ ಟ್ರೀ ಪಾರ್ಕಿನಿಂದ ಇಲಾಖೆ ಕೇವಲ ರೂ 7.5 ಲಕ್ಷ ಆದಾಯ ಗಳಿಸಿದೆ.

ಸದ್ಯ ಇಲಾಖೆಯ ಬಳಿ ಎರಡು ಆಯ್ಕೆಗಳಿವೆ ಎಂದು ಹೇಳುವ ಕರಿಕಲನ್, ಒಂದೋ ಹೆಚ್ಚು ನಿರ್ವಹಣಾ ವೆಚ್ಚಕ್ಕಾಗಿ ಸರಕಾರಕ್ಕೆ ಬೇಡಿಕೆ ಸಲ್ಲಿಸಬೇಕು ಇಲ್ಲವೇ ಟ್ರೀ ಪಾರ್ಕನ್ನು ಖಾಸಗೀಕರಣಗೊಳಿಸಬೇಕು ಎಂದು ಅವರು ವಿವರಿಸುತ್ತಾರೆ. ಸರಕಾರ ಹೆಚ್ಚುವರಿ ನಿರ್ವಹಣಾ ವೆಚ್ಚ ನೀಡುವ ಸಾಧ್ಯತೆ ಕಡಿಮೆಯಾದುದರಿಂದ ಟ್ರೀ ಪಾರ್ಕ್ ಮಾಲಕತ್ವವನ್ನು ಮಾತ್ರ ಸರಕಾರ ಉಳಿಸಿಕೊಂಡು ಉಳಿದೆಲ್ಲಾ ವಿಚಾರಗಳಲ್ಲಿ ಯಾವುದಾದರೂ ಖಾಸಗಿ ಸಂಸ್ಥೆಗೆ ಜವಾಬ್ದಾರಿ ವಹಿಸಬೇಕು ಎನ್ನುತ್ತಾರೆ ಅವರು. ಜನರಿಗೆ ಅರಣ್ಯ ಹಾಗೂ ಅದರ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲೆಂದೇ ಟ್ರೀ ಪಾರ್ಕ್ ನಿರ್ಮಿತವಾಗಿದೆಯೇ ಹೊರತು ಲಾಭಕ್ಕಾಗಿಯಲ್ಲ ಎಂದು ನೆನಪಿಸುವ ಅವರು, ಅದೇ ಸಮಯ ಅಗತ್ಯ ಹಣವಿಲ್ಲದೆ ಇಂತಹ ಪಾರ್ಕಿನ ನಿರ್ವಹಣೆಯೂ ಕಷ್ಟಕರವಾಗುವುದು ಎನ್ನುತ್ತಾರೆ.