ಅಂಕೋಲಾ -ಹುಬ್ಬಳ್ಳಿ ರಾ ಹೆ ಅಗಲೀಕರಣಕ್ಕೆ ಕೊನೆಗೂ ಕ್ಲಿಯರೆನ್ಸ್ ನೀಡಿದ ಅರಣ್ಯ ಇಲಾಖೆ

ವಿಶೇಷ ವರದಿ

ಕಾರವಾರ : ಅಂಕೋಲಾ ಮತ್ತು ಹುಬ್ಬಳ್ಳಿ ನಡುವಿನ ಪ್ರಮುಖ ರಾಷ್ಟ್ರೀಯ ಹೆದ್ದಾರಿ 52ರ ರಸ್ತೆ ಅಗಲೀಕರಣಕ್ಕೆ ಕೊನೆಗೂ ಕಾಲ ಕೂಡಿಬಂದಿದೆ. ಗೋಕರ್ಣ ರಸ್ತೆ ಮತ್ತು ಹುಬ್ಬಳ್ಳಿ ನಡುವಿನ 142 ಕಿ ಮೀ ದೂರದ ರಸ್ತೆ ಅಗಲೀಕರಣಕ್ಕೆ ಅರಣ್ಯ ಇಲಾಖೆ ಕೊನೆಗೂ ಅನುಮತಿ ನೀಡಿದೆ. ಈ ಮೂಲಕ ದಟ್ಟ ಕಾಡಿನ ಮಧ್ಯೆ ಸಾಗುವ ರಸ್ತೆ ಮಾರ್ಗ ಅಗಲೀಕರಣಗೊಳ್ಳಲಿದೆ.

“ಬಹಳಷ್ಟು ವರ್ಷಗಳ ಸತತ ಪ್ರಯತ್ನದ ಫಲವಾಗಿ ನಾವು ಕೊನೆಗೂ ಅಂಕೋಲಾ ಮತ್ತು ಹುಬ್ಬಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ 52ರ ರಸ್ತೆ ಅಗಲೀಕರಣಕ್ಕೆ ಕೇಂದ್ರ ಸರಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಅನುಮತಿಯನ್ನು ಪಡೆದುಕೊಳ್ಳುವಲ್ಲಿ  ಯಶಸ್ವಿಯಾಗಿದ್ದೇವೆ. ಪ್ರಸ್ತುತ 14 ಮೀಟರ್ ಅಗಲವಿದ್ದ ರಸ್ತೆಯನ್ನು ಅಗಲೀಕರಣಗೊಳಿಸಲು ಅನುಮತಿ ನೀಡುವಂತೆ ಕೋರಿ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಮನವಿ ಮಾಡಿತ್ತು. ಇದನ್ನು ದ್ವಿಪಥ ರಸ್ತೆಯನ್ನಾಗಿ 30 ಮೀಟರ್ ಅಗಲೀಕರಣಗೊಳಿಸಲು ಅನುಮತಿಯನ್ನು ಕೇಳಿದ್ದೆವು. ಪಶ್ಚಿಮಘಟ್ಟದ ದಟ್ಟ ಹಸಿರ ಕಾನನದ ನಡುವೆ ಸಾಗುವ ಈ ರಸ್ತೆಯನ್ನು ಅಗಲೀಕರಣಗೊಳಿಸುವುದು, ಅನುಮತಿ ಪಡೆದುಕೊಳ್ಳುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅಲ್ಲದೆ ಅಂಕೋಲಾ ಮತ್ತು ಹುಬ್ಬಳ್ಳಿ ನಡುವಿನ ರೈಲು ಮಾರ್ಗಕ್ಕೆ ಸಂಬಂಧಿಸಿದ ಯೋಜನೆಗಳ ವಿಚಾರವೂ ಇಲ್ಲಿ ಮುಖ್ಯವಾಗಿತ್ತು. ವನ್ಯಜೀವಿಗಳ ರಕ್ಷಣೆ, ವಿಫುಲ ಖನಿಜ ಸಂಪತ್ತು ನಾಶ ಈ ಎಲ್ಲಾ ವಿಚಾರಗಳನ್ನೂ ಗಮನದಲ್ಲಿಟ್ಟುಕೊಂಡು ಅನುಮತಿ ಪಡೆದುಕೊಳ್ಳುವುದು ಕಷ್ಟವಾಗಿತ್ತು. ಈ ನಡುವೆ ಹುಬ್ಬಳ್ಳಿ-ಅಂಕೋಲಾ ನಡುವೆ ರೈಲ್ವೇ ಕಾರಿಕಾರ್ ಮಾಡಲು ದಕ್ಷಿಣ ರೈಲ್ವೇ ಇಲಾಖೆ ಕೂಡಾ ಹೆಚ್ಚು ಆಸಕ್ತಿ ವಹಿಸಿಕೊಂಡಿತ್ತು. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕೊನೆಗೂ ನಾವು ರಸ್ತೆ ಅಭಿವೃದ್ಧಿಗೆ ಅನುಮತಿಯನ್ನು ಪಡೆದುಕೊಳ್ಳುವಲ್ಲಿ ಸಫಲರಾಗಿದ್ದೇವೆ” ಎಂದು ಅರಣ್ಯ ಸಚಿವ ರೈ ಹೇಳಿದ್ದಾರೆ.